ಬೆಂಗಳೂರು: ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದ್ದು, ಕಡಿಮೆ ಪ್ರಮಾಣದಲ್ಲಿ ಬರ ಪರಿಹಾರ ಘೋಷಿಸಿರುವುದನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಗೃಹ ಸಚಿವ ಡಾ.ಪರಮೇಶ್ವರ್, ಸಚಿವ ಚಲುವರಾಯಸ್ವಾಮಿ, ರಾಮಲಿಂಗರೆಡ್ಡಿ, ಕೃಷ್ಣ ಬೈರೇಗೌಡ ಸೇರಿದಂತೆ ಸಚಿವರು, ಶಾಸಕರು ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕರ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದೆ. ಅನ್ಯಾಯ ಮಾಡಿದೆ. ಗೋ ಬ್ಯಾಕ್ ಮೋದಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಜನ ಜಾನುವಾರುಗಳು, ರೈತರು ಸಂಕಷ್ಟಕ್ಕೀಡಾಗಿದ್ದಾರೆ, ಹೀಗಿರುವಾಗ ಬರ ಪರಿಹಾರವನ್ನು ಕೇಂದ್ರ ಸರ್ಕಾರ ವಿಳಂಬ ಮಾಡಿ ಕೊಟ್ಟಿದ್ದೂ ಅಲ್ಲದೇ ನಮ್ಮ ಮನವಿಯ ಕಾಲುಭಾಗವನ್ನೂ ನೀಡಿಲ್ಲ. ನಾವು ಕೇಳಿದ್ದು, 18,172 ಕೋಟಿ ರೂಪಾಯಿ. ಕೇಂದ್ರ ನೀಡುತ್ತಿರುವುದು ಕೇವಲ 3,464 ಕೋಟಿ ರೂ. ನಾವೇನು ಭಿಕ್ಷೆ ಕೇಳುತ್ತಿದ್ದೆವೇಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಬರ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.