ನವದೆಹಲಿ: ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿದೆ.
ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕಕ್ಕೆ ಬರ ಪರಿಹಾರ ನಿಧಿ ಬಂದಿಲ್ಲ, ತಕ್ಷಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಈ ವೇಳೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ, ಬರ ಪರಿಹಾರ ಸಂಬಂಧ ಚುನಾವಣಾ ಆಯೋಗದ ಅನುಮತಿ ಕೇಳಿದ್ದೇವೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಬಹುದು. ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ವಕೀಲರ ಅಲಭ್ಯತೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡುವಂತೆ ರಾಜ್ಯ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಅರ್ಜಿ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.