ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದರಿಂದ 56,879 ರೈತರ 440.30 ಕೋಟಿ ರೂ. ಬಡ್ಡಿ ಮನ್ನಾ ಆಗಲಿದೆ. 2024ರ ಫೆಬ್ರವರಿ 20ರೊಳಗೆ ಸಂಬಂಧಿಸಿದ ಸಹಕಾರ ಸಂಘ, ಬ್ಯಾಂಕುಗಳಿಗೆ ಸಂಪೂರ್ಣ ಸಾಲ ಬಾಕಿ ಪಾವತಿಸಿದಲ್ಲಿ ಮಾತ್ರ ಬಡ್ಡಿ ಮನ್ನಾ ಪ್ರಯೋಜನ ಸಿಗಲಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.
ಬಡ್ಡಿ ಮನ್ನಾ ಬೆಳೆ ಸಾಲಕ್ಕೆ ಅನ್ವಯವಾಗುವುದಿಲ್ಲ. ಬೆಳೆ ಸಾಲ ಅಲ್ಪಾವಧಿ ಸಾಲವಾಗಿದ್ದು, ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಹೀಗಾಗಿ ಅದಕ್ಕೆ ಬಡ್ಡಿ ಮನ್ನಾ ಅನ್ವಯವಾಗುವುದಿಲ್ಲ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸುಸ್ತಿ ಸಾಲಗಳಿಗೆ ಮಾತ್ರ ಬಡ್ಡಿ ಮನ್ನಾ ಅನ್ವಯವಾಗಲಿದೆ ಎಂದು ಹೇಳಲಾಗಿದೆ.