ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಿಇಟಿಯಲ್ಲಿ ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೈ ಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಿ ಅದರ ಫಲಿತಾಂಶ ಆಧರಿಸಿ ರ್ಯಾಂಕಿಂಗ್ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ಆದೇಶ ನೀಡಿದೆ.
ಒಟ್ಟು 50 ಪ್ರಶ್ನೆಗಳನ್ನು ಕೈಬಿಡುವ ಹಿನ್ನೆಲೆಯಲ್ಲಿ 190 ಅಂಕಗಳಿಗೆ ಸೀಮಿತವಾಗಿ ಮೌಲ್ಯಮಾಪನ ನಡೆಯಲಿದೆ. ವೇಳಾಪಟ್ಟಿಯಂತೆ ಮೇ ಕೊನೆಯ ವಾರ ಸಿಇಟಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ಕೇಳಲಾಗಿದ್ದ ಎರಡು ಪ್ರಶ್ನೆಗಳಿಗೆ ಎರಡು ಗ್ರೇಸ್ ಮಾರ್ಕ್ಸ್ ನೀಡಲು ಕೂಡ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.
ಮೇ, ಜೂನ್ ನಲ್ಲಿ ನೀಟ್, ಕಾಮೆಡ್ -ಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸೋಮವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ -2 ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಿರ್ಧಾರ ಕೈ ಬಿಡಲಾಗಿದೆ. ಖಚಿತತೆಗೆ ವಿಷಯವಾರು ರಚಿಸಿದ್ದ ತಜ್ಞರ ಸಮಿತಿಯು ಭೌತಶಾಸ್ತ್ರ -9, ರಸಾಯನಶಾಸ್ತ್ರ -15, ಗಣಿತ -15, ಜೀವಶಾಸ್ತ್ರ ವಿಷಯದಲ್ಲಿ 11 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿಸಿದೆ.
ಈ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಕೈ ಬಿಡಲಾಗುವುದು. ಎರಡು ತಪ್ಪು ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೀ ಉತ್ತರಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಪಠ್ಯೇತರ ಪ್ರಶ್ನೆಗಳ ಪಟ್ಟಿ ನೀಡಲಿದೆ. ಈ ಪಟ್ಟಿಯ ಪ್ರಶ್ನೆ ಹೊರತುಪಡಿಸಿ ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಲಾಗಿದೆ.