ಹೊಸದಿಲ್ಲಿ: ಡ್ರೋನ್‌ಗಳು ಕಾಲಿಟ್ಟ ನಂತರ ನಮ್ಮ ಹಲವು ಕೆಲಸಗಳು ಸುಲಲಿತವಾಗಿವೆ. ಇದೀಗ ಡೆಲಿವರಿ ಏಜೆಂಟ್ ಗಳ ಕೆಲಸವನ್ನು ಕೂಡ ಡ್ರೋನ್ ಮಾಡುತ್ತಿದೆ. ಕೆಲವೇ ನಿಮಿಷಗಳಲ್ಲಿ ದೂರದ ಸ್ಥಳಗಳಿಗೆ ತಲುಪುವ ಮೂಲಕ ತಮ್ಮ ಕರ್ತವ್ಯಗಳನ್ನು ಸರಳಗೊಳಿಸುತ್ತವೆ.
ಆದರೆ, ಈ ಪರಿಕಲ್ಪನೆಯು ಇನ್ನೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಆಹಾರವನ್ನು ತಲುಪಿಸಲು ಡ್ರೋನ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸಲು ವ್ಯಕ್ತಿಯೊಬ್ಬರು ಈ ಪರಿಕಲ್ಪನೆಯನ್ನು ತಂದಿದ್ದಾರೆ. ಸೋಹನ್ ರೈ ಎಂಬುವವರು ತಮ್ಮ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಜೊಮಾಟೊದಲ್ಲಿ ಒಂದು ದಿನ ಕೆಲಸ ಮಾಡಲು ನಿರ್ಧರಿಸಿದ್ರು.
ಆಹಾರ ವಿತರಿಸುವ ಡೆಲಿವರಿ ಏಜೆಂಟ್ ಗಳಿಗೆ ಮನೆಗಳನ್ನು ಹುಡುಕುವುದು ಅಥವಾ ಪ್ರತಿಕೂಲ ಹವಾಮಾನದಲ್ಲಿ ನ್ಯಾವಿಗೇಟ್ ಮಾಡುವುದು ಎಷ್ಟು ಸವಾಲಿನ ಸಂಗತಿಯಾಗಿದೆ ಎಂದು ಅವರು ಅರಿತುಕೊಂಡರು. ಹೀಗಾಗಿ, ಅವರು ತಮ್ಮ ಡ್ರೋನ್ ಪರಿಣತಿಯನ್ನು ಬಳಸುವ ನಿರ್ಧಾರವನ್ನು ಮಾಡಿದರು.
ಪೈಲಟ್ ಇಲ್ಲದೇ ಡ್ರೋನ್ ಅನ್ನು ಹಾರಾಟ ಮಾಡಲಾಯಿತು. ಗ್ರಾಹಕರ ಮನೆಗೆ ಆರ್ಡರ್ ಅನ್ನು ತಲುಪಿಸಲು, ಅವರು ಡ್ರಾಪಿಂಗ್ ಕಾರ್ಯವಿಧಾನವನ್ನು ಸಹ ಕಂಡುಹಿಡಿದರು. ಪಿಜ್ಜಾ ಹಟ್‌ನಿಂದ ಪಡೆದ ಆರ್ಡರ್ ಅನ್ನು ತಲುಪಿಸಲು ತೆರೆದ ಸ್ಥಳಕ್ಕೆ ಬಂದರು. ನಂತರ ಪಿಜ್ಜಾವನ್ನು ಡ್ರೋನ್‌ಗೆ ಹಾಕಲಾಯಿತು. ಬಳಿಕ ಅದನ್ನು ಗ್ರಾಹಕರಿಗೆ ತಲುಪಿಸಲಾಯಿತು. ಡೆಲಿವರಿ ಪಾಯಿಂಟ್ 1.5 ಕಿಲೋಮೀಟರ್ ದೂರದಲ್ಲಿತ್ತು.
ಎಲ್ಲವನ್ನೂ ಸಿದ್ಧಪಡಿಸಿದ ಅವರು ಡ್ರೋನ್‌ಗೆ ಡೆಲಿವರಿ ಮಾರ್ಗವನ್ನು ಅಪ್‌ಲೋಡ್ ಮಾಡಿದರು. ಪಿಜ್ಜಾ ಹಿಡಿದ ಡ್ರೋನ್ ಹಾರಾಟವನ್ನು ಪ್ರಾರಂಭಿಸಿತು. ಸೋಹನ್ ಅದನ್ನು ಟ್ರ್ಯಾಕ್ ಮಾಡಿದರು. ಪಿಜ್ಜಾ ವಿತರಿಸಿದ ಡ್ರೋನ್ ಹಿಂದೆ ಎರಡನೇ ಡ್ರೋನ್ ಅನ್ನು ಹಾರಿಸುವ ಮೂಲಕ ಅದರ ವಿತರಣೆಯನ್ನು ರೆಕಾರ್ಡ್ ಮಾಡಿದ್ರು.
ಡ್ರೋನ್ ಗ್ರಾಹಕರ ಮನೆ ಸಮೀಪ ಹೋದಾಗ ಗ್ರಾಹಕರು ತಮ್ಮ ಕಟ್ಟಡದಿಂದ ಹೊರಗೆ ಬರುವಂತೆ ಫೋನ್ ಮೂಲಕ ಸೂಚಿಸಿದರು. ಡ್ರೋನ್ ತನ್ನ ಪಿಜ್ಜಾವನ್ನು ತಲುಪಿಸುತ್ತಿರುವುದನ್ನು ಕಂಡು ಮಹಿಳೆ ದಿಗ್ಭ್ರಮೆಗೊಂಡರು.