ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಅಥವಾ ಕಾಡಂಚಿನ ಕುಗ್ರಾಮಗಳಲ್ಲಿ ವಾಸಿಸುವ ಜನತೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಸಮೀಪದ ನಗರ, ಪಟ್ಟಣಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಲಭ್ಯವಾಗದ ಕಾರಣ ನಡೆದುಕೊಂಡೇ ಹೋಗಬೇಕಾಗುತ್ತದೆ.
ಇದರ ಮಧ್ಯೆ ಒಡಿಶಾದ ನೌಪಾದ ಜಿಲ್ಲಾಡಳಿತ ಮಾಡಿರುವ ಕಾರ್ಯವೊಂದು ಈಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಕುಗ್ರಾಮ ಒಂದರಲ್ಲಿ ವಾಸಿಸುತ್ತಿದ್ದ ಅಂಗವಿಕಲನಿಗೆ ಪಿಂಚಣಿ ವಿತರಿಸಲು ಡ್ರೋನ್ ಬಳಕೆ ಮಾಡಲಾಗಿದ್ದು, ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆತರಾಮ್ ಸತ್ನಾಮಿ ಎಂಬ ಅಂಗವಿಕಲ ಭಾಲೇಶ್ವರ ಪಂಚಾಯಿತಿ ವ್ಯಾಪ್ತಿಯ ಭೂತಕಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದು, ಇವರು ಪಿಂಚಣಿ ಪಡೆಯಲು ಪ್ರತಿ ತಿಂಗಳು ದಟ್ಟ ಕಾಡಿನ ಮೂಲಕ ಎರಡು ಕಿಲೋಮೀಟರ್ ನಡೆದು ಹೋಗಬೇಕಿತ್ತು.
ಇವರ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಪಂಚಾಯಿತಿ, ಸರಪಂಚರಾದ ಸರೋಜ್ ಅಗರ್ವಾಲ್ ಅವರ ನೆರವಿನಿಂದ ಡ್ರೋನ್ ಮೂಲಕ ಪಿಂಚಣಿ ಹಣವನ್ನು ಕಳುಹಿಸಿಕೊಡಲಾಗಿದೆ. ತಾನು ನಡೆದು ಹೋಗುವ ಸಂಕಷ್ಟ ತಪ್ಪಿದ್ದಕ್ಕಾಗಿ ಹೆತರಾಮ್ ಈಗ ಸಂತಸಗೊಂಡಿದ್ದಾರೆ.