ಪಶ್ಚಿಮ ಆಸ್ಟ್ರೇಲಿಯಾದ ವಾರ್ಟನ್ ಬೀಚ್‌ನಲ್ಲಿ ಸೋಮವಾರ ಒಂದು ಆಘಾತಕಾರಿ ಘಟನೆ ನಡೆದಿದೆ. ನ್ಯೂಜಿಲೆಂಡ್‌ನ ಸ್ಟೀವನ್ ಪೇನ್ (37) ಎಂಬ ಸರ್ಫರ್, ತನ್ನ ಗೆಳತಿಯ ಜೊತೆ ಸರ್ಫಿಂಗ್ ಮಾಡುತ್ತಿರುವಾಗ ಶಾರ್ಕ್ ದಾಳಿಗೆ ಬಲಿಯಾಗಿದ್ದಾರೆ. ಪೇನ್ ಅವರು ಸುಮಾರು 50 ಮೀಟರ್ ದೂರದಲ್ಲಿ, ಎದೆ ಆಳದ ನೀರಿನಲ್ಲಿ ಸರ್ಫಿಂಗ್ ಮಾಡುತ್ತಿದ್ದರು. ಅವರ ಕಿರುಚಾಟ ಕೇಳಿ ಗೆಳತಿ ಮತ್ತು ಇತರರು ಓಡಿಬಂದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕಡಲತೀರವನ್ನು ಮುಚ್ಚಿ ಹುಡುಕಾಟ ಆರಂಭಿಸಿದರು. ಡ್ರೋನ್ ಮೂಲಕ ಚಿತ್ರೀಕರಿಸಿದ ದೃಶ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ಶಾರ್ಕ್ ದಾಳಿ ಖಚಿತವಾಗಿದೆ. ಪೇನ್ ಅವರ ಸರ್ಫ್‌ಬೋರ್ಡ್ ಪತ್ತೆಯಾಗಿದ್ದು, ಅದರ ಮೇಲೆ ಶಾರ್ಕ್ ಕಚ್ಚಿದ ಗುರುತುಗಳಿವೆ. ಆದರೆ, ಅವರ ದೇಹ ಇನ್ನೂ ಪತ್ತೆಯಾಗಿಲ್ಲ.
ಪೊಲೀಸರು ಶಾರ್ಕ್‌ನ ಜಾತಿ ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜೋಡಿ ತಮ್ಮ ನಾಯಿಯೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ಪೇನ್ ಅವರು ಮೆಲ್ಬೋರ್ನ್‌ನಲ್ಲಿ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಸ್ವಯಂಸೇವಕ ಅಗ್ನಿಶಾಮಕರಾಗಿದ್ದರು. ನ್ಯೂಜಿಲೆಂಡ್‌ನ ಲೋವರ್ ಹಟ್‌ನಲ್ಲಿ ಬೆಳೆದ ಅವರು, ಪ್ರತಿಭಾವಂತ ರಗ್ಬಿ ಆಟಗಾರರಾಗಿದ್ದರು.
ಘಟನೆಯಿಂದ ಗೆಳತಿ ಆಘಾತಕ್ಕೊಳಗಾಗಿದ್ದು, ಆಕೆಯ ಜೀವನವೇ ತಲೆಕೆಳಗಾದಂತಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಮೂರು ಮಾರಣಾಂತಿಕ ಶಾರ್ಕ್ ದಾಳಿಗಳು ನಡೆದಿವೆ.