ವಾಹನ ಸವಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯನ್ನು ಸರ್ಕಾರ ಹೆಚ್ಚಿಸಿದೆ. ಕೊರೊನಾ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಮಾನ್ಯತೆಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಸರ್ಕಾರ ಮಾನ್ಯತೆಯನ್ನು ಜೂನ್ 30ರವರೆಗೆ ಹೆಚ್ಚಿಸಿತ್ತು. ಸರ್ಕಾರದ ಈ ನಿರ್ಧಾರದಿಂದ ಕೋಟ್ಯಾಂತರ ಮಂದಿಗೆ ನೆಮ್ಮದಿ ಸಿಕ್ಕಿದೆ. ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 1, 2020 ರೊಳಗೆ ಅವಧಿ ಮುಗಿದ ಅಥವಾ ಸೆಪ್ಟೆಂಬರ್ 30, 2021 ರಂದು ಮುಕ್ತಾಯಗೊಳ್ಳಲಿರುವ ದಾಖಲೆಗಳು ಮತ್ತು ಲಾಕ್‌ಡೌನ್ ನಿರ್ಬಂಧಗಳಿಂದಾಗಿ ನವೀಕರಿಸಲಾಗದ ದಾಖಲೆಗಳು ಈಗ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತವೆ ಎಂದು ಸರ್ಕಾರ ಹೇಳಿದೆ. ಸಚಿವಾಲಯವು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ.
ಕೊರೊನಾ ರೋಗದ ಹಿನ್ನಲೆಯಲ್ಲಿ ಚಾಲನಾ ಪರವಾನಗಿ, ಆರ್‌ಸಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ ದಾಖಲೆಗಳ ಮಾನ್ಯತೆಯನ್ನು ಸರ್ಕಾರ 6 ಬಾರಿ ಹೆಚ್ಚಿಸಿದೆ. ಈ ಎಲ್ಲಾ ದಾಖಲೆಗಳು ಜೂನ್ 30-2021 ರವರೆಗೆ ಮಾನ್ಯವಾಗಿದ್ದವು. ಈ ಮೊದಲು ಮಾರ್ಚ್ 30-2020, ಜೂನ್ 9-2020, ಆಗಸ್ಟ್ 24-2020, ಡಿಸೆಂಬರ್ 27-2020, ಮಾರ್ಚ್ 26 -2021ರವರೆಗೆ ವಿಸ್ತರಿಸಲಾಗಿತ್ತು.