
ವಾಹನ ಸವಾರರಿಗೆ ನೆಮ್ಮದಿ ಸುದ್ದಿಯೊಂದಿದೆ. ಚಾಲನಾ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಅವಧಿ ಮುಗಿಯುತ್ತಿದ್ದರೆ ಅಥವಾ ಅವಧಿ ಮುಗಿದಿದ್ದರೆ ಭಯಪಡುವ ಅಗತ್ಯವಿಲ್ಲ. ಈ ತಿಂಗಳ ಅಂತ್ಯದವರೆಗೆ ಇದನ್ನು ನವೀಕರಿಸುವ ಅವಕಾಶವಿದೆ.
ಕೊರೊನಾ ವೈರಸ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತ್ತು. ಜೂನ್ 30ರಂದು ಮುಕ್ತಾಯಗೊಳ್ಳುತ್ತಿದ್ದ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿತ್ತು. ಇದ್ರಿಂದ ಕೋಟ್ಯಾಂತರ ಜನರು ನೆಮ್ಮದಿಯಿಂದಿದ್ದರು.
ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 1, 2020 ರಂದು ಅವಧಿ ಮುಗಿದ ಮತ್ತು ಲಾಕ್‌ಡೌನ್ ನಿರ್ಬಂಧಗಳಿಂದಾಗಿ ನವೀಕರಿಸಲಾಗದ ಈ ದಾಖಲೆಗಳನ್ನು ಸೆಪ್ಟೆಂಬರ್ 30, 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುತ್ತದೆ. ಈ ಸಂಬಂಧ ಸಚಿವಾಲಯವು ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಆದೇಶ ಹೊರಡಿಸಿದೆ.
ಕೊರೊನಾದಿಂದಾಗಿ ಸರ್ಕಾರವು ಚಾಲನಾ ಪರವಾನಗಿ, ಆರ್‌ಸಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ ದಾಖಲೆಗಳ ಮಾನ್ಯತೆಯನ್ನು ಹಲವು ಬಾರಿ ಹೆಚ್ಚಿಸಿದೆ. ಈ ಮೊದಲು ರಸ್ತೆ ಮತ್ತು ಸಾರಿಗೆ ಸಚಿವಾಲಯವು ಮಾರ್ಚ್ 30-2020, ಜೂನ್ 9-2020, ಆಗಸ್ಟ್ 24-2020, ಡಿಸೆಂಬರ್ 27-2020, ಮಾರ್ಚ್ 26-2021ರವರೆಗೆ ವಿಸ್ತರಿಸಿತ್ತು.