ಬೆಂಗಳೂರು: ಖಾಸಗಿ ವಾಹನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ಸೇರಿ ಇತರೆ ನೌಕರರು, ವರ್ಕ್ ಶಾಪ್ ಗಳಲ್ಲಿ ಕೆಲಸ ಮಾಡುವವರಿಗೆ ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯ ಕಲ್ಪಿಸಲು ಅಗತ್ಯ ಸಂಪನ್ಮೂಲ ಸಂಗ್ರಹಕ್ಕೆ ಚಿಂತನೆ ನಡೆದಿದೆ.
ಸಂಪನ್ಮೂಲ ಸಂಗ್ರಹಕ್ಕೆ ವಿಧಿಸದಿರಲು ನಿರ್ಧರಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ 9 ಲಕ್ಷ ವಾಣಿಜ್ಯ ವಾಹನಗಳಿದ್ದು, ಟ್ರ್ಯಾಕ್ಟರ್ ಮತ್ತು ಇತರೆ ವಾಹನಗಳು ಸೇರಿ ಸುಮಾರು 25 ಲಕ್ಷ ವಾಹನಗಳಿವೆ. ಚಾಲಕರು, ನಿರ್ವಾಹಕರು, ಮೆಕಾನಿಕ್ ಗಳು, ಕ್ಲೀನರ್ ಗಳು ಸೇರಿ ಸುಮಾರು 30 ಲಕ್ಷ ಕಾರ್ಮಿಕ ಇರುವ ಅಂದಾಜು ಇದೆ.
ಇವರು ಅಪಘಾತ ಮತ್ತು ವಯೋಸಹಜ ನಿಧನರಾದ ಸಂದರ್ಭದಲ್ಲಿ, ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಪರಿಹಾರ ಮತ್ತು ಇತರೆ ಸೌಲಭ್ಯ ನೀಡಲು ಸಂಪನ್ಮೂಲ ಸಂಗ್ರಹಕ್ಕೆ ವಾಹನಗಳ ಮೇಲೆ ಸೆಸ್ ವಿಧಿಸಲು ಕಾರ್ಮಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸೆಸ್ ಸಂಗ್ರಹ ಪ್ರಸ್ತಾವನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರೋಧಿಸಿದ್ದಾರೆ.
ಇತ್ತೀಚೆಗಷ್ಟೇ ತೆರಿಗೆ ಹೆಚ್ಚಳ ಮಾಡಲಾಗಿದ್ದು, ಈಗ ಸೆಸ್ ವಿಧಿಸಿದರೆ ವಿರೋಧ ವ್ಯಕ್ತವಾಗುತ್ತದೆ. ಹಾಗಾಗಿ ಬೇರೆ ಲೆಕ್ಕ ಶೀರ್ಷಿಕೆಯಡಿಯಲ್ಲಿ ಹಣ ಪಡೆಯಲು ಅವಕಾಶವಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಪ್ಪಿಸಬಹುದು ಎಂದು ಸಲಹೆ ನೀಡಿದ್ದಾರೆ. ರಾಮಲಿಂಗಾರೆಡ್ಡಿ ಅವರ ಸಲಹೆಗೆ ಸಚಿವ ಸಂತೋಷ್ ಲಾಡ್ ಸಮ್ಮತಿಸಿದ್ದಾರೆ.
ಖಾಸಗಿ ವಾಹನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಚಾಲಕರು ಸೇರಿ ಇತರೆ ನೌಕರರು, ವರ್ಕ್ ಶಾಪ್ ಗಳಲ್ಲಿ ಕೆಲಸ ಮಾಡುವವರಿಗೆ ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯ ಕಲ್ಪಿಸಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಮೆ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ನೆರವು ಮೊದಲಾದ ಸೌಲಭ್ಯ ಕಲ್ಪಿಸಲು ಚರ್ಚೆ ನಡೆದಿದ್ದು, ಈ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.