ಮಡಿಕೇರಿ: ಚಾಲನೆಯ ವೇಳೆಯಲ್ಲಿ ನಿಯಂತ್ರಣ ತಪ್ಪಿದ ಲಾರಿಯಿಂದ ಹಾರಿದ ಚಾಲಕ ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ಶನಿವಾರ ಸಂತೆ ಸಮೀಪದ ಗುಡುಗಳಲೆ ಗ್ರಾಮದ ಬಳಿ ನಡೆದಿದೆ.
ಸುಂಕಣ್ಣ ಮೃತಪಟ್ಟ ಚಾಲಕ ಎಂದು ಹೇಳಲಾಗಿದೆ. ಲಾರಿಯಲ್ಲಿದ್ದ ನರೇಶ್ ಎಂಬುವರು ಅಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದಿಂದ ಸೋಮವಾರಪೇಟೆಗೆ ಸಿಮೆಂಟ್ ತುಂಬಿಸಿಕೊಂಡು ತೆರಳುತ್ತಿದ್ದ ಲಾರಿ ಗುಡುಗಳಲೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದೆ. ಲಾರಿ ಪಲ್ಟಿಯಾಗುವ ಅಪಾಯದ ಮುನ್ಸೂಚನೆ ಅರಿತ ಇಬ್ಬರೂ ಕೂಡ ಲಾರಿಯಿಂದ ಹಾರಿದ್ದಾರೆ. ಆದರೆ, ನಿಯಂತ್ರಣ ತಪ್ಪಿ ಚಾಲಕ ಸುಂಕಣ್ಣ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದು, ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ ಸಂತೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.