ಭೋಪಾಲ್‌ನ ಶಾಹಪುರದಲ್ಲಿ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ಅವರ ಕಾರ್ ಚಾಲಕನೇ ಕಳ್ಳತನ ಮಾಡಿದ್ದಾನೆ. ನಗದು ಹಾಗೂ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿರುವ ಚಾಲಕ, ಅಧಿಕಾರಿ ಮಗನಿಗೆ ಮೆಸ್ಸೇಜ್ ಮಾಡಿ 20 ದಿನಗಳಲ್ಲಿ ಅವರ ಹಣ ಮತ್ತು ಚಿನ್ನಾಭರಣಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದಾನೆ.
ಶಹಪುರ ಪ್ರದೇಶದ ಬಂಗಲೆ ಸಂಖ್ಯೆ ಬಿ-165ರಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದೆ. ಲೋಕೋಪಯೋಗಿ ಇಲಾಖೆಯ ಉಪವಿಭಾಗಾಧಿಕಾರಿ ಕಪಿಲ್ ತ್ಯಾಗಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮಾಹಿತಿಯ ಪ್ರಕಾರ, ಎಸ್‌ಡಿಒ ಕಪಿಲ್ ತ್ಯಾಗಿ, ಪತ್ನಿ ಜೊತೆ ಅಮೆರಿಕಾದಲ್ಲಿರುವ ಮಗಳ ಮನೆಗೆ ಹೋಗಿದ್ದರು. ಮಗ ಚಿರಾಯು ತ್ಯಾಗಿ ಇಂದೋರ್‌ಗೆ ಹೋಗಿದ್ದರು. ಮನೆಯಲ್ಲಿ ಅಧಿಕಾರಿಯ ವೃದ್ಧ ಅಮ್ಮ ಇದ್ದರು. ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಚಾಲಕ ದೀಪಕ್ ಯಾದವ್ ಗೆ ನೀಡಲಾಗಿತ್ತು.
ದೀಪಕ್ ಶನಿವಾರ ಫಿಸಿಯೋಥೆರಪಿಗಾಗಿ ಚಿರಾಯು ಅಜ್ಜಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಆಕೆಯನ್ನು ಕ್ಲಿನಿಕ್‌ಗೆ ಡ್ರಾಪ್ ಮಾಡಿದ ನಂತರ ಮನೆಗೆ ಬಂದು, ಹಣ, ಚಿನ್ನ ಬ್ಯಾಗ್ ಗೆ ತುಂಬಿದ್ದಾನೆ. ನಂತ್ರ ಅಜ್ಜಿಯನ್ನು ಮನೆಗೆ ಬಿಟ್ಟು ಪರಾರಿಯಾಗಿದ್ದಾನೆ. ಆ ನಂತ್ರ ಚಿರಾಯುವಿಗೆ ವಾಟ್ಸ್ ಅಪ್ ಮೆಸ್ಸೇಜ್ ಮಾಡಿ, ಹಣ, ಚಿನ್ನ ಕದ್ದಿದ್ದು, 20 ದಿನಗಳಲ್ಲಿ ಮರಳಿಸುತ್ತೇನೆ. ನನ್ನನ್ನು ಹುಡುಕಬೇಡಿ ಎಂದಿದ್ದಾನೆ.
ಚಿರಾಯು ದೂರಿನ ಮೇರೆಗೆ ಮನೆಗೆ ಬಂದ ಪೊಲೀಸರು, ತನಿಖೆ ಶುರು ಮಾಡಿದ್ದಾರೆ. ಚಾಲಕ ದೀಪಕ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಮಚ್ಚು, ಚಾಕು ಹಿಡಿದು ಮಾಡುವ ಅನೇಕ ರೀಲ್ಸ್ ಗಳಿವೆ.