ನಿರ್ಭಯಾ ಪ್ರಕರಣ ಅಂದರೆ ಸಾಕು ಇಂದಿಗೂ ಎಲ್ಲರೂ ಬೆಚ್ಚಿಬೀಳ್ತಾರೆ. ದೆಹಲಿಯಲ್ಲಿ ಬಸ್‌ವೊಂದರಲ್ಲಿ ನಡೆದ ಆ ಭಯಂಕರ ಅತ್ಯಾಚಾರ ಪ್ರಕರಣ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದುಕೊಂಡಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಿರಲಿ ಅಂತ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ತಂದರೂ ದುಷ್ಕರ್ಮಿಗಳು ಅತ್ಯಾಚಾರ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಮತ್ತೆ ಅಂತಹದ್ದೇ ಒಂದು ಭೀಕರ ಪ್ರಕರಣ ಬಿಹಾರ್‌ನಲ್ಲಿ ನಡೆದಿದೆ.
ಅದು ಬಿಹಾರ್‌ನ ಬಸ್, ಪಾಟ್ನಾಗೆ ಹೋಗುತ್ತಿತ್ತು. ಅದೇ ಬಸ್‌ನಲ್ಲಿದ್ದ ಕಂಡಕ್ಟರ್, ಕ್ಲೀನರ್, ಬಾಲಕಿಗೆ ಪಾಟ್ನಾಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬಸ್‌ನಲ್ಲಿ ಕೂರಿಸಿಕೊಂಡಿದ್ದಾರೆ. ಬಸ್ ಕೆಲ ದೂರ ಹೋದ ನಂತರ ಬಸ್ ಸ್ಟಾಪ್‌ನಿಂದ ಚಾಲಕ ಬಸ್ ಅನ್ನು ಬೈಪಾಸ್ ರಸ್ತೆಗೆ ತೆಗೆದುಕೊಂಡು ಹೋಗಿದ್ದಾನೆ. ಆಮೇಲೆ ಅವಕಾಶ ನೋಡಿ ಕ್ಲೀನರ್, ಡ್ರೈವರ್ ಮತ್ತು ಕಂಡಕ್ಟರ್ ಜೊತೆ ಸೇರಿ ಬಾಲಕಿಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸಿದ್ದಾರೆ. ಬಾಲಕಿಗೆ ಪ್ರಜ್ಞೆ ತಪ್ಪಿದ ಬಳಿಕ ಅದೇ ಬಸ್‌ನಲ್ಲಿ ಒಬ್ಬರ ಬಳಿಕ ಇನ್ನೊಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರದ ಬಳಿಕ ಕಂಡಕ್ಟರ್, ಚಾಲಕ ಮತ್ತು ಹೆಲ್ಪರ್ ಸಂತ್ರಸ್ತೆಯನ್ನ ಬಸ್‌ಲ್ಲಿ ಬಿಟ್ಟು ಬೀಗ ಹಾಕಿ ಓಡಿ ಹೋಗಿದ್ದಾರೆ. ಬಾಲಕಿಗೆ ಪ್ರಜ್ಞೆ ಬಂದಾಗ ಒಳಗಿನಿಂದ ಬಸ್ ಬಾಗಿಲು ತಟ್ಟಿದ್ದಾಳೆ. ಆ ವೇಳೆ ದಾರಿಹೋಕರು ಬಸ್ಸಿನ ಬಾಗಿಲು ತೆರೆದು ಸ್ಥಳೀಯ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ಥೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ನನಗೆ ಮದ್ಯ ಕುಡಿಸಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ಥೆ ದೂರು ಕೊಟ್ಟಿದ್ದಾಳೆ.
ಈ ಘಟನೆ ಇಡೀ ಬೇತಿಯಾದಲ್ಲಿ ತಲ್ಲಣ ಮೂಡಿಸಿದೆ. ಸದ್ಯ ಪೊಲೀಸರು ಕ್ಲೀನರ್ ಹಾಗೂ ಕಂಡಕ್ಟರ್ನ್ನ ಬಂಧಿಸಿದ್ದಾರೆ. ಪರಾರಿಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹಾಡಹಗಲೇ ಬೇತಿಯಾ ಬಸ್ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿರುವುದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.