ಬಾಗಲಕೋಟೆ: ನೀತಿ ಸಂಹಿತೆ ನಡುವೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗಳು ಮತ್ತು ಜಮಖಂಡಿ ತಹಶೀಲ್ದಾರ್ ಸದಾಶಿವ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಕೆಲಸಕ್ಕೆ ಗೈರು ಹಾಜರಾಗಿ ಗುತ್ತಿಗೆದಾರರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದರು. ಮದ್ಯಸೇವನೆ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ದೂರುಗಳು ಸ್ವೀಕೃತವಾಗಿವೆ. ಮಾದರಿ ನೀತಿ ಸಂಹಿತೆ ಹಿನ್ನೆಲೆ ಸರ್ಕಾರಿ ವಸತಿ ಗೃಹಗಳಲ್ಲಿ ಹೊರಗಿನವರಿಗೆ ಅವಕಾಶ ಇರುವುದಿಲ್ಲ.
ಸರ್ಕಾರಿ ವಸತಿ ಗೃಹಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದೀರಿ. ನಿಮ್ಮ ಅನುಮತಿ ಇಲ್ಲದೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರಿ ವಸತಿಗೃಹಕ್ಕೆ ಹೋಗಿದ್ದಾರೆ. ಈ ಬಗ್ಗೆ ನೋಟಿಸ್ ತಲುಪಿದ 24 ಗಂಟೆ ಒಳಗೆ ಉತ್ತರ ನೀಡಿ. ತಪ್ಪಿದಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಶೋಕಾಸ್ ನೋಟಿಸ್ ನೀಡಲಾಗಿದೆ.
ಜಮಖಂಡಿ ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಇಂಜಿನಿಯರ್ ಗಳಾದ ರಾಮಪ್ಪ ರಾಥೋಡ್, ಗಜಾನನ ಪಾಟೀಲ, ಜಗದೀಶ ನಾಡಗೌಡ, ಶ್ರೀಶೈಲ ಸೇರಿ ಹಲವರಿಗೆ ನೋಟಿಸ್ ನೀಡಲಾಗಿದೆ.