ಮೈಸೂರು: ಮದ್ಯಸೇವನೆಗೆ ಹಣ ನೀಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡಿನ ಸರಸ್ವತಿ ಕಾಲೋನಿಯಲ್ಲಿ ಘಟನೆ ನಡೆದಿದೆ. ನಂಜನಗೂಡಿನ ಮಹದೇವ ನಗರದ ನಿವಾಸಿ ರಫೀಕ್(40) ಮೃತಪಟ್ಟವರು. ನೀಲಕಂಠ ನಗರದ ನಿವಾಸಿ ಸಲೀಂ ಮತ್ತು ಆತನ ಸ್ನೇಹಿತರು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ರಫೀಕ್ ಬಳಿ ಬಂದು ಮದ್ಯ ಸೇವನೆಗೆ ಸಲೀಂ ಮತ್ತು ಆತನ ಸ್ನೇಹಿತ ಹಣ ಕೇಳಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ರಫೀಕ್ ಜೊತೆಗೆ ಗಲಾಟೆ ಮಾಡಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದಾರೆ ರಫೀಕ್ ನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗಾಯಗೊಂಡಿದ್ದ ರಫೀಕ್ ಸಾವನ್ನಪ್ಪಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.