ನೀರು ನಮ್ಮ ದೇಹಕ್ಕೆ ಬೇಕೇ ಬೇಕು. ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಎಲ್ಲಾ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ನಮ್ಮ ದೇಹದ ಶೇ.70ರಷ್ಟು ಭಾಗ ನೀರೇ ಇದೆ. ನೀರು ದೇಹದ ಅಂಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತದೆ.
ನೀರಿನ ಕೊರತೆಯಿಂದಾಗಿ ತಲೆನೋವು, ಮಲಬದ್ಧತೆ, ಒಣ ಚರ್ಮ, ಕೀಲು ನೋವು, ಅಜೀರ್ಣ, ಕಡಿಮೆ ರಕ್ತದೊತ್ತಡ, ಬೊಜ್ಜಿನ ಸಮಸ್ಯೆ ಮತ್ತು ಸ್ತನ ಕ್ಯಾನ್ಸರ್‌ನಂತಹ ಅನೇಕ ತೊಂದರೆಗಳು ಉಂಟಾಗಬಹುದು. ಹಾಗಾಗಿ ಯಾವಾಗ ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ: ನೀವು ಹೆಚ್ಹೆಚ್ಚು ನೀರು ಕುಡಿದರೆ, ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುತ್ತಿದ್ದರೆ ನಿಮ್ಮ ಚಯಾಪಚಯ ದರವು ಹೆಚ್ಚಾಗಬಹುದು. ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಹ ಉತ್ತಮವಾಗಿರುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತದೆ.
ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ: ನೀರು ಕುಡಿಯುವುದರಿಂದ ನಮಗೆ ಹಸಿವಾಗುವುದಿಲ್ಲ. ಇದು ತೂಕವನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಮೂತ್ರದ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗುತ್ತದೆ. ಹೀಗಾಗಿ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿ: ನಿಮಗೂ ದಣಿವು ಅಥವಾ ದೌರ್ಬಲ್ಯ ಕಾಣಿಸಿಕೊಂಡರೆ ನೀರು ಕುಡಿಯಿರಿ. ದೇಹದಲ್ಲಿನ ನಿರ್ಜಲೀಕರಣದಿಂದಾಗಿ ದಣಿವಾಗುತ್ತದೆ. ನೀರು ಕುಡಿದಾಗ ರಕ್ತಸಂಚಾರ ಸುಗಮವಾಗಿ ದೇಹಕ್ಕೆ ಶಕ್ತಿಯೂ ಸಿಗುತ್ತದೆ.
ಒತ್ತಡ ಕಡಿಮೆ ಮಾಡಲು ಸಹಾಯಕ: ಮೆದುಳಿನ ಶೇ.70ರಿಂದ 80ರಷ್ಟು ಅಂಗಾಂಶ ನೀರಿನಿಂದ ಮಾಡಲ್ಪಟ್ಟಿದೆ. ನಿರ್ಜಲೀಕರಣದಿಂದಾಗಿ, ದೇಹದ ಜೊತೆಗೆ, ಮೆದುಳು ಸಹ ಒತ್ತಡವನ್ನು ಅನುಭವಿಸುತ್ತದೆ. ಆದ್ದರಿಂದ, ಕಾಲಕಾಲಕ್ಕೆ ನೀರು ಕುಡಿಯುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು.
ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ: ನೀರಿನ ಕೊರತೆಯಿಂದಾಗಿ ಕೂದಲು ತೆಳ್ಳಗೆ ಮತ್ತು ದುರ್ಬಲವಾಗಲು ಪ್ರಾರಂಭಿಸುತ್ತದೆ. ಕೂದಲಿನ ಶುಷ್ಕತೆ ಮತ್ತು ನಿರ್ಜೀವತೆಗೆ ನೀರಿನ ಕೊರತೆಯೂ ಕಾರಣ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯವಾಗುತ್ತದೆ.
ಬೆಳಿಗ್ಗೆ ಮತ್ತು ಮಧ್ಯಾಹ್ನ ಎಷ್ಟು ನೀರು ಕುಡಿಯಬೇಕು?
ಬೆಳಿಗ್ಗೆ ಎದ್ದ ತಕ್ಷಣ ನೀವು ಕನಿಷ್ಟ 3 ಲೋಟ ನೀರು ಕುಡಿಯಬೇಕು. ಪ್ರತಿದಿನ ಈ ಅಭ್ಯಾಸವನ್ನು ತಪ್ಪಿಸಬೇಡಿ. ಊಟವಾಗಿ ಒಂದು ಗಂಟೆಯ ನಂತರ ನೀರು ಕುಡಿಯಿರಿ. ನೀರು ಕುಡಿದ 45 ನಿಮಿಷಗಳ ನಂತರ ಬೆಳಗಿನ ಉಪಾಹಾರವನ್ನು ತೆಗೆದುಕೊಳ್ಳಬೇಕು. ಅದಕ್ಕೂ ಮೊದಲು ಏನನ್ನೂ ತಿನ್ನದಿರುವುದು ಉತ್ತಮ.