ನಿತ್ಯ ಬೆಳಗೆದ್ದು ಟೀ ಕಾಫಿ ಕುಡಿಯುವ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದೀರಾ? ಖಾಲಿ ಹೊಟ್ಟೆಗೆ ಇದನ್ನು ಸೇವಿಸುವುದು ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಆ ಚಟದಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ.
ನಿತ್ಯ ಬೆಳಗೆದ್ದ ತಕ್ಷಣ ಖಾಲಿ ಹೊಟ್ಟೆಗೆ ಶುಂಠಿ ಚಹಾ ಮಾಡಿ ಕುಡಿಯಿರಿ. ಇದು ನಾಲಗೆಗೂ ಚುರುಕು, ದೇಹಕ್ಕೂ ಒಳ್ಳೆಯದು. ಮಳೆಗಾಲದಲ್ಲಿ ಕಾಡುವ ಸೋಂಕು ಸಂಬಂಧಿ ಶೀತ ಜ್ವರಕ್ಕೂ ಇದು ಅತ್ಯುತ್ತಮ ಮದ್ದಾಗಬಲ್ಲದು.
ನೀರು ಕುದಿಯುವಾಗ ಶುಂಠಿ ಜಜ್ಜಿ ಹಾಕಿ. ಎಂಟು ತುಳಸಿ ಎಲೆಗಳನ್ನು ಹಾಕಿ ಐದು ನಿಮಿಷ ಕುದಿಸಿ. ಇದಕ್ಕೆ ಹಾಲು, ಸ್ವಲ್ಪ ಬೆಲ್ಲ ಬೆರೆಸಿಯೂ ಕುಡಿಯಬಹುದು. ಚಹಾ ಬಿಡಲು ಸಾಧ್ಯವೇ ಇಲ್ಲ ಎನ್ನುವವರು ಚಿಟಿಕೆ ಚಹಾ ಪುಡಿ ಹಾಕಿ ಕುದಿಸಿ ಸಕ್ಕರೆ ಬೆರೆಸಿಯೂ ಕುಡಿಯಬಹುದು.
ಸಕ್ಕರೆ ಬದಲು ಜೇನುತುಪ್ಪ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಎಲ್ಲ ರೋಗಗಳಿಂದ ಮುಕ್ತಿ ನೀಡುವಂತದ್ದು. ಕರಿಮೆಣಸು ಪುಡಿಗೆ ಜೀರಿಗೆ ಹಾಗೂ ದಾಲ್ಚಿನಿ ಪುಡಿ ಬೆರೆಸಿ ಕುಡಿದರೆ ಹಲವಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇವು ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ದೇಹ ತೂಕ ಇಳಿಸಲೂ ನೆರವಾಗುತ್ತವೆ.