
ಐಜ್ವಾಲ್: ಮಿಜೋರಾಂ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಬಂದ ಮಹಿಳೆ ನಾಲ್ಕು ದಿನದ ಗಂಡು ಮಗುವನ್ನು ಅಪಹರಿಸಿದ್ದಾಳೆ.
ದಕ್ಷಿಣ ಮಿಜೋರಾಂನ ಲುಂಗ್ಲೆ ಪಟ್ಟಣದ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಯ ಸೇವಕರ ಸಮವಸ್ತ್ರ ಧರಿಸಿದ್ದ ಮಹಿಳೆ ನವಜಾತ ಆರೈಕೆ ಘಟಕಕ್ಕೆ ಮಗುವನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿ ಮಗು ಸಮೇತ ಪರಾರಿಯಾಗಿದ್ದಾಳೆ.
ತಿಪೆರಾಘಾಟ್ ಗ್ರಾಮದ ನಿವಾಸಿಗಳಾದ ಸುರೋಟಾ ಚಕ್ಮಾ, ದಿಲಾನ್ ಚಕ್ಮಾ ದಂಪತಿಗೆ ಲುಂಗ್ಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆಸ್ಪತ್ರೆ ಸಿಬ್ಬಂದಿ ಸಮವಸ್ತ್ರದಲ್ಲಿದ್ದ ಮಹಿಳೆ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಅರ್ಧ ಗಂಟೆಯೊಳಗೆ ಮರಳಿ ಮಗುವನ್ನು ಕರೆತರುತ್ತೇನೆ ಎಂದು ತಾಯಿಗೆ ಹೇಳಿ ಮಗುವನ್ನು ಪಡೆದಿದ್ದಾಳೆ.
ಆದರೆ, ಆಕೆ ಬರುವುದು ವಿಳಂಬವಾಗಿದ್ದರಿಂದ ಮಗುವನ್ನು ಮಹಿಳೆ ಅಪಹರಿಸಿರುವುದು ತಾಯಿಗೆ ಗೊತ್ತಾಗಿದೆ. ಆಸ್ಪತ್ರೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಮಗು ಅಪಹರಿಸಿದ ಮಹಿಳೆಗಾಗಿ ಹುಡುಕಾಟ ನಡೆಸಲಾಗಿದೆ.