ಚಿಕ್ಕಮಗಳೂರು: ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ಆಗಸ್ಟ್ 15 ರಿಂದ ಶಾರದಾಂಬಾ ದೇವಿ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಶೃಂಗೇರಿ ಶಾರದಾ ಮಠದಿಂದ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆ ತೊಟ್ಟು ಬಂದವರಿಗೆ ದೇವಾಲಯದ ಅರ್ಧಮಂಟಪದ ಒಳಗೆ ಪ್ರವೇಶ ಇರುವುದಿಲ್ಲ. ಅಂತವರು ಹೊರಗಿನ ಪ್ರಕಾರದಿಂದಲೇ ದೇವರ ದರ್ಶನ ಪಡೆಯಬೇಕಾಗುತ್ತದೆ.
ಪುರುಷರು ಧೋತಿ, ಶಲ್ಯ. ಉತ್ತರೀಯ, ಮಹಿಳೆಯರು ಸೀರೆ, ರವಿಕೆ, ಸಲ್ವಾರ್, ದುಪ್ಪಟ್ಟ, ಲಂಗ -ದಾವಣಿಗಳಂತಹ ಸಾಂಪ್ರದಾಯಿಕ ಉಡುಗೆ ಧರಿಸಿ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ. ಶ್ರೀಮಠದ ಗುರು ನಿವಾಸದಲ್ಲಿ ಪಾದಪೂಜೆ, ಬಿಕ್ಷಾ ವಂದನೆ, ಗುರು ದರ್ಶನದ ಸಂದರ್ಭದಲ್ಲಿ ಈ ಹಿಂದಿನಿಂದಲೂ ನಿಯಮ ಜಾರಿಯಲ್ಲಿದೆ.