ದ್ವಿಚಕ್ರ ವಾಹನವೊಂದನ್ನು ಹೀಗೂ ಖರೀದಿ ಮಾಡಬಹುದು ಎಂದು ತೋರಿಸಿಕೊಟ್ಟ ಅಸ್ಸಾಂ ವ್ಯಕ್ತಿಯೊಬ್ಬರು ನೆಟ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಅಸ್ಸಾಂನ ಡರ‍್ರಾಂಗ್ ಜಿಲ್ಲೆಯ ಸಿಪಜ್ಹಾರ್ ಪ್ರದೇಶದ ಮೊಹಮ್ಮದ್ ಸೈದುಲ್ ಹಕ್ ವರ್ಷಗಳಿಂದ ಕೂಡಿಟ್ಟಿದ್ದ ನಾಣ್ಯಗಳನ್ನು ಚೀಲದಲ್ಲಿ ತುಂಬಿ ಕೊಟ್ಟು ತಮ್ಮ ಈ ಕನಸಿನ ಸ್ಕೂಟರ್ ಖರೀದಿ ಮಾಡಿದ್ದಾರೆ.
“ನಾನು ಪುಟ್ಟದೊಂದು ಅಂಗಡಿಯನ್ನು ನಡೆಸುತ್ತೇನೆ. ಸ್ಕೂಟರ್ ಖರೀದಿ ಮಾಡುವುದು ನನ್ನ ಕನಸಾಗಿತ್ತು.ಇದಕ್ಕೆಂದು ನಾನು 5-6 ವರ್ಷಗಳಿಂದ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದೆ. ಕೊನೆಗೂ ನನ್ನ ಕನಸು ಈಡೇರಿರುವುದು ನನಗೆ ಖುಷಿ ಕೊಟ್ಟಿದೆ,” ಎನ್ನುತ್ತಾರೆ ಸೈದುಲ್.
“90,000 ರೂ.ಗಳನ್ನು ನಾಣ್ಯಗಳಲ್ಲೇ ತಂದು ಸ್ಕೂಟರ್ ಖರೀದಿ ಮಾಡಲು ಗ್ರಾಹಕರೊಬ್ಬರು ನಮ್ಮ ಶೋರೂಂಗೆ ಬಂದಿದ್ದಾರೆ ಎಂದು ನಮ್ಮ ಎಕ್ಸಿಕ್ಯೂಟಿವ್ ಒಬ್ಬರು ತಿಳಿಸಿದಾಗ ನನಗೆ ಅಚ್ಚರಿಯಾಯಿತು, ಏಕೆಂದರೆ ನಾನು ಇಂಥದ್ದೊಂದು ಸುದ್ದಿಯನ್ನು ಟಿವಿಯಲ್ಲಿ ನೋಡಿದ್ದೆ. ಆತ ಭವಿಷ್ಯದಲ್ಲಿ ನಾಲ್ಕು ಚಕ್ರದ ವಾಹನ ಖರೀದಿ ಮಾಡುವಂತಾಗಲಿ ಎಂದು ಹಾರೈಸುತ್ತೇನೆ,” ಎಂದು ದ್ವಿಚಕ್ರ ವಾಹನದ ಶೋರೂಂ ಮಾಲೀಕರು ತಿಳಿಸಿದ್ದಾರೆ.
ಮಾರ್ಚ್ 2022ರಲ್ಲಿ, ತಮಿಳುನಾಡಿನ ಭೂಪತಿ ಹೆಸರಿನ ವ್ಯಕ್ತಿಯೊಬ್ಬರು ಬಜಾಜ್ ಡೊಮಿನಾರ್ ಬೈಕ್ ಖರೀದಿ ಮಾಡಲು 2.6 ಲಕ್ಷ ರೂ.ಗಳನ್ನು ನಾಣ್ಯಗಳಲ್ಲೇ ಪಾವತಿ ಮಾಡಿದ್ದರು. ಈತ ಮಾಡಿದ ಪಾವತಿಯ ಲೆಕ್ಕಾಚಾರ ಮಾಡಲು 10 ಗಂಟೆಗಳಷ್ಟು ಕಾಲ ಹಿಡಿದಿತ್ತು ಎನ್ನಲಾಗಿದೆ.
ಕಳೆದ ವರ್ಷದ ಆರಂಭದಲ್ಲಿ ಉತ್ತರಾಖಂಡದ ರುದ್ರಪುರದ ವ್ಯಕ್ತಿಯೊಬ್ಬರು 50,000 ರೂ.ಗಳನ್ನು ನಾಣ್ಯದಲ್ಲೇ ಪಾವತಿ ಮಾಡಿ ಟಿವಿಎಸ್ ಜುಪೀಟರ್ ಸ್ಕೂಟರ್ ಖರೀದಿ ಮಾಡಿದ್ದರು.