ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿಪಡಿಸಿದ 2 -DG(2-ಡಿಯೋಕ್ಸಿ-ಡಿ-ಗ್ಲುಕೋಸ್) ಔಷಧ ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಶುಕ್ರವಾರ ಹೇಳಿದ್ದಾರೆ.
ಡಿ.ಆರ್.ಡಿ.ಒ. ಅಭಿವೃದ್ಧಿಪಡಿಸಿದ 2 -ಡಿಜಿ ಔಷಧ ಕೊರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿಯಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಅಲ್ಲದೆ, ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸುಧಾಕರ್ ಹೇಳಿದ್ದಾರೆ.
ಬೆಂಗಳೂರು ಡಿ.ಆರ್.ಡಿ.ಒ. ಕ್ಯಾಂಪಸ್ ಗೆ ಸಚಿವರು ಭೇಟಿ ನೀಡಿದ್ದು, ಸಾಂಕ್ರಾಮಿಕ ರೋಗವನ್ನು ನಿವಾರಿಸುವ ಬಗ್ಗೆ ವಿಜ್ಞಾನಿಗಳ ಪ್ರಯತ್ನ, ಅಧ್ಯಯನದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೋವಿಡ್ ವಿರುದ್ಧದ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ ಈ ಔಷಧವನ್ನು ಡಿ.ಆರ್.ಡಿ.ಒ., ಹೈದರಾಬಾದ್ ನ ಡಾಕ್ಟರ್ ರೆಡ್ಡಿ ಲ್ಯಾಬೋರೇಟರೀಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಔಷಧ ಈಗಾಗಲೇ ತುರ್ತು ಬಳಕೆಯ ಅನುಮೋದನೆಯನ್ನು ಪಡೆದಿದೆ.
ಡಿಆರ್‌ಡಿಒ ಕ್ಯಾಂಪಸ್ ನ ಪ್ರಧಾನ ಸಂಶೋಧನಾ ಸಂಸ್ಥೆಯಲ್ಲಿ ಸಾಂಕ್ರಾಮಿಕ ರೋಗ ತಡೆಯಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ವಿಜ್ಞಾನಿಗಳು ಸಚಿವರಿಗೆ ವಿವರಿಸಿದರು. ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದ ರೋಗಿಗಳ ತ್ವರಿತ ಚೇತರಿಕೆಗೆ ಔಷಧ ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.