ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದ್ದು, ನಿರ್ವಹಣೆ ಕುರಿತಾಗಿ ತೀರ್ಮಾನಿಸಲು ಇಂದು ಸಂಪುಟ ಉಪಸಮಿತಿ ಸಭೆ ನಡೆಸಲಾಗುವುದು.
ಕಂದಾಯ ಸಚಿವ ಕೃಷ್ಣಭೈರೇಗೌಡ ಅಧ್ಯಕ್ಷತೆಯ ಉಪಸಮಿತಿಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎನ್. ಚೆಲುವರಾಯ ಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ, ಕೆ.ಎನ್. ರಾಜಣ್ಣ ಸದಸ್ಯರಾಗಿದ್ದಾರೆ.
ರಾಜ್ಯದಲ್ಲಿ ಬಿತ್ತನೆ ಗುರಿ ಕಡಿಮೆಯಾಗಿದ್ದು, ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಈ ನಡುವೆ ಬರ ಘೋಷಣೆ ನಿಯಮ ಬದಲಾವಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಇನ್ನು ಸ್ಪಂದಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು.
ಬೆಳೆ ನಷ್ಟ, ಮಳೆ ಕೊರತೆ ಬಗ್ಗೆ ಸಂಬಂಧಿತ ಇಲಾಖೆಗಳಿಂದ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದು, ಬರ ಘೋಷಣೆ ಮಾಡುವುದು, ಪರಿಹಾರ ನೀಡಲು ಎಷ್ಟು ಹಣ ಬೇಕಾಗಬಹುದು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದು, ಮೋಡ ಬಿತ್ತನೆ ಮೊದಲಾದ ವಿಷಯಗಳ ಕುರಿತು ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.