
ಬೆಂಗಳೂರು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರೊಂದಿಗೆ ಗುರುವಾರ ಸಂವಾದ ನಡೆಸಿದ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಯ ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲು ಅತಿ ಹೆಚ್ಚು ವರ್ಷಗಳನ್ನು ವ್ಯಯ ಮಾಡಿರುತ್ತಾರೆ. 60ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ಸೇವೆ ಸಲ್ಲಿಸಲು ಕೆಲವೇ ವರ್ಷಗಳ ಅವಕಾಶ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಗ ಪ್ರತಿಕ್ರಿಯೆ ನೀಡಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅನುಭವಿ ವೈದ್ಯರನ್ನು ಉಳಿಸಿಕೊಳ್ಳಲು ನಿವೃತ್ತಿ ವಯಸ್ಸನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಆರೋಗ್ಯ ಸೇವೆ ಖಚಿತಪಡಿಸಿಕೊಳ್ಳಲು ಅನುಭವಿ ವೈದ್ಯರ ಸೇವೆ ಸದ್ಬಳಕೆ ಮಾಡಿಕೊಳ್ಳಲು ಶೀಘ್ರದಲ್ಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ ಮಾಡುವ ಬಗ್ಗೆ ಸಿಎಂ ಜತೆ ಚರ್ಚೆ ಬಳಿಕ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.