ಬೆಂಗಳೂರು: ಕಾವೇರಿ ನೀರಿನ ಸಂಪರ್ಕ ನೀಡಲು ಜಲಮಂಡಳಿ ಹೆಸರು ದುರುಪಯೋಗ ಪಡಿಸಿಕೊಳ್ಳುವ ಹಾಗೂ ನಿಯಮ ಬಾಹಿರವಾಗಿ ಹೆಚ್ಚಿನ ಹಣ ಕೇಳುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವ ಪ್ರಕ್ರಿಯೆ ಸುಲಭವಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಿಸಿದ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಹೊಸ ಸಂಪರ್ಕ ಪಡೆಯಲು ಮನೆಗಳಿಗೆ, ಅಪಾರ್ಟ್ಮೆಂಟ್ ಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ನಿಯಮಗಳ ಅನುಸಾರ ಹಣ ನಿಗದಿಪಡಿಸಿ ಡಿಮ್ಯಾಂಡ್ ನೋಟಿಸ್ ನೀಡಲಾಗುತ್ತದೆ. ನಿಯಮ ಬಾಹಿರವಾಗಿ ಹಣ ಕೇಳುವ ಹಾಗೂ ಸಂಸ್ಥೆಯ ಹೆಸರು ಹೇಳಿಕೊಂಡು ಬರುವ ಮಧ್ಯವರ್ತಿಗಳು, ಜಲ ಮಂಡಳಿ ಸಿಬ್ಬಂದಿ, ಅಸೋಸಿಯೇಷನ್ ಸದಸ್ಯರ ಮೇಲೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
bwssbvigilance@gmail.com ಗೆ ಅಗತ್ಯ ಮಾಹಿತಿಯ ಮೂಲಕ ದೂರು ನೀಡಬೇಕು. ದೂರುದಾರರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ. ದೂರು ಬಂದ 24 ಗಂಟೆಯೊಳಗೆ ವಿಜಿಲೆನ್ಸ್ ತಂಡ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.