ಬೆಂಗಳೂರು: ಕೋವಿಡ್ ಅಕ್ರಮದ ತನಿಖೆಗೆ ರಾಜ್ಯ ಸರ್ಕಾರ ತನಿಖಾ ಆಯೋಗ ರಚನೆ ಮಾಡಿ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ. ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ. ಈಗ ಕಾಂಗ್ರೆಸ್ ನವರು ಅಕ್ರಮವಾಗಿದೆ ಎಂದು ಆರೋಪಿಸಿ ತನಿಖಾ ಆಯೋಗ ರಚಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ಕಿಡಿ ಕಾರಿದರು.
ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ಸಾಮಾಜಿಕ ಜವಾಬ್ದಾರಿಯೂ ಇರಲಿಲ್ಲ, ಆಗ ಪಾದಯಾತ್ರೆ ಮಾಡಿ ಕೋವಿಡ್ ನಿಯಮ ಉಲ್ಲಂಘಿಸಿದ್ದರು.ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಪ್ರಕರಣಗಳನ್ನೆಲ್ಲ ಹಿಂಪಡೆದಿದ್ದಾರೆ. ಇವರಿಗೆ ತನಿಖೆ ನಡೆಸುವ ಉದ್ದೇಶವಿದ್ದಿದ್ದರೆ ಲೋಕಾಯುಕ್ತಕ್ಕೆ ಕೊಡಬಹುದಿತ್ತು. ಅದನ್ನು ಬಿಟ್ಟು ತನಿಖಾ ಆಯೋಗ ರಚನೆ ಮಾಡಿರುವುದು ರಾಜಕೀಯ ದುರುದ್ದೇಶ ಎಂದು ಹೇಳಿದರು.