ಬೆಂಗಳೂರು: ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ರೈತರ ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ವಿಪಕ್ಷಗಳು ಬೆಂಬಲ ನೀಡಿವೆ. ಈ ಮಧ್ಯೆ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ಮಂಡ್ಯಕ್ಕೆ ತೆರಳುತ್ತಿರುವುದಾಗಿ ಹೇಳಿರುವ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕುಮಾರಸ್ವಾಮಿ ಪ್ರತಿಭಟನೆ ಮಾಡಲಿ, ಆದರೆ ಸರ್ಕಾರದ ವಿರುದ್ಧ ಮಾಡುವುದರಲ್ಲಿ ಏನರ್ಥ? ಅವರು ಪ್ರತಿಭಟನೆ ಮಾಡುವುದಾದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡಲಿ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಹೆಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕಾವೇರಿ ನೀರಿಗಾಗಿ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಹಿಂದಿನ ಸರ್ಕಾರಗಳು ನೇಮಕ ಮಾಡಿರುವ ಕಾನೂನು ತಂಡವೇ ರಾಜ್ಯದ ಪರವಾಗಿ ವಾದಮಾಡುತ್ತಿವೆ. ಹಾಗಾಗಿ ಲೀಗಲ್ ಟೀಂ ಹಾಗೂ ಸರ್ಕಾರ ಹೇಗೆ ಅಸಮರ್ಥ ಆಗುತ್ತದೆ? ಎಂದು ಪ್ರಶ್ನಿಸಿದರು.
ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಏನಾಗುತ್ತದೆ ಎಂದು ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಹಿಂದೆ ಬಂಗಾರಪ್ಪನವರ ಸರ್ಕಾರ ನ್ಯಾಯಾಲಯದ ಆದೇಶ ಧಿಕ್ಕರಿಸಿದಾಗ ಸೇನಾ ಪಡೆ ಕಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು. ಅಂಥ ಸ್ಥಿತಿ ಉಂಟಾಗಲಿಲ್ಲ ಅದು ಬೇರೆ ವಿಷಯ. ಇಂತಹ ಬಿಕ್ಕಟ್ಟಿನ ಸ್ಥಿತಿ ಎದುರಾದಾಗ ವಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಹೇಳಿದರು.