ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಲೆಕ್ಷನ್ ಗಾಗಿ ರಾಜ್ಯಕ್ಕೆ ಬಂದಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಪ್ರಧಾನ ಕಾರ್ಯದರ್ಶಿಗಳು ಅದನ್ನೇ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್, ಕಲೆಕ್ಷನ್ ಅಂದ್ರೆ ಏನು? ಹೆಗಲ ಮೇಲೆ ಬ್ಯಾಗ್ ಹೊತ್ತುಕೊಂಡು ಹೋಗ್ತಾರಾ? ಬಿಜೆಪಿಯವರ ಬಗ್ಗೆಯೂ ನಾವು ಹೀಗೇ ಹೇಳಬಹುದಲ್ಲ? ಅವರು ಅಧಿಕಾರದಲ್ಲಿದ್ದಾಗ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದರು. ಅವರು ಅದನ್ನೇ ಮಾಡ್ತಿದ್ರಾ? ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಅದನ್ನೇ ಮಾಡುತ್ತಿದ್ದರು ಎಂದು ನಾವು ಹೇಳಬೇಕಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರ ಬರ ಅಧ್ಯಯನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಬರ ಶುರುವಾಗಿ 3 ತಿಂಗಳು ಆಯ್ತು, ಮಳೆ ನಿಂತು 3 ತಿಂಗಳಾಯ್ತು. ಇಷ್ಟು ದಿನ ಬಿಜೆಪಿಯವರು ಏನು ಮಾಡುತ್ತಿದ್ದರು? ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಎಂದು ಘೋಷಿಸಿದ್ದೇವೆ. 17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈವರೆಗೂ 1 ರೂಪಾಯಿಯನ್ನೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ. ಬಿಜೆಪಿ ನಾಯಕರು ಮೊದಲು ಕೇಂದ್ರದ ಬಳಿ ಮಾತನಾಡಿ ಅನುದಾನ ಕೊಡಿಸಲಿ ಎಂದು ಆಗ್ರಹಿಸಿದರು.