ತುಮಕೂರು: ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆ ಸೇರಿದಂತೆ ವಿವಿಧ ಪ್ರಕರಣ ಕೈಬಿಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪತ್ರ ಬರೆದ ತಕ್ಷಣ ಪ್ರಕರಣ ಹಿಂಪಡೆದು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಹಲವರು ತಾವು ಅಮಾಯಕರಾಗಿದ್ದೇವೆ. ತಮ್ಮ ವಿರುದ್ಧದ ಕೇಸ್ ವಾಪಸ್ ಪಡೆಯುವಂತೆ ಶಾಸಕರುಗಳಿಗೆ ಪತ್ರ ಬರೆದು ಮನವಿ ಮಾಡುತ್ತಾರೆ. ಹಾಗಾಗಿ ಸಾಕಷ್ಟು ಶಾಸಕರು ಪತ್ರ ಬರೆಯುತ್ತಾರೆ. ಹಾಗಂತ ಪತ್ರ ಬರೆದ ತಕ್ಷಣ ಪ್ರಕರಣವನ್ನು ವಾಪಸ್ ಪಡೆಯಲ್ಲ. ಈಗ ಡಿ.ಕೆ.ಶಿವಕುಮಾರ್ ಪತ್ರ ಬರೆದಾಕ್ಷಣ ಸರ್ಕಾರ ಕೇಸ್ ಹಿಂಪಡೆಯಲ್ಲ, ಅದಕ್ಕೊಂದು ಪದ್ಧತಿ ಇದೆ ಎಂದು ಹೇಳಿದರು.
ಸಚಿವ ಸಂಪುಟ ಉಪಸಮಿತಿ ಇದೆ. ಗೃಹ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ ನಂತರ ಪ್ರಸ್ತಾವನೆಯನ್ನು ಸಮಿತಿ ಮುಂದೆ ಇಡುತ್ತೇವೆ. ಕಾನೂನು ಹಾಗೂ ಇಲಾಖೆಯ ತಜ್ಞರು ಚರ್ಚೆ ಮಾಡ್ತಾರೆ. ಕಾನೂನು ಚೌಕಟ್ಟಿನಲ್ಲಿ ಪ್ರಕರಣವನ್ನು ತೆಗೆಯಬಹುದೇ ಬೇಡವೇ ಎಂಬುದನ್ನು ತಿಳಿಸುತ್ತಾರೆ. ಉಪ ಸಮಿತಿಯಲ್ಲಿಯೂ ಪ್ರಕರಣ ತೆಗೆಯಬಹುದು ಎಂದು ಸೂಚಿಸಿದರೆ ಮತ್ತೆ ಸಚಿವ ಸಂಪುಟ ಸಭೆ ಮುಂದೆ ಪ್ರಸ್ತಾಪ ಇಡಲಾಗುತ್ತದೆ. ಇಲ್ಲಿ ಅಂತಿಮವಾದರೆ ಮಾತ್ರ ಪ್ರಕರಣ ಹಿಂಪಡೆಯಲಾಗುತ್ತದೆ. ಇದು ಯಾವ ಸಮುದಾಯದ ಓಲೈಕೆಗಾಗಿ ಅಲ್ಲ, ಎಲ್ಲಾ ಸರ್ಕಾರಗಳಲ್ಲಿಯೂ ಇದು ನಡೆಯುತ್ತದೆ ಎಂದು ವಿವರಿಸಿದರು.