ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ವಿರುದ್ಧದ ಹೋರಾಟ ಮುಂದುವರಿದಿರುವ ನಡುವೆಯೇ ಕೊರೊನಾ ಮೂರನೆ ಅಲೆ ತಡೆಯಲು ಬೇಕಾದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಈ ನಡುವೆ ರಾಜ್ಯದಲ್ಲಿ ಶಾಲೆ ಹಾಗೂ ಕಾಲೇಜುಗಳನ್ನ ಮುಂದುವರಿಸಬೇಕಾ ಬೇಕಾ ಬೇಡವಾ ಅನ್ನೋದರ ಬಗ್ಗೆ ಅಧ್ಯಯನ ನಡೆಸಿದ್ದ ಡಾ. ದೇವಿ ಶೆಟ್ಟಿ ನೇತೃತ್ವದ ಸಮಿತಿ ವರದಿಯನ್ನ ಸಿಎಂ ಬಿ.ಎಸ್. ಯಡಿಯೂರಪ್ಪನವರ ಕೈಗೆ ಇಟ್ಟಿದೆ.
1 ಗಂಟೆಗಳ ಕಾಲ ಸಿಎಂ ಯಡಿಯೂರಪ್ಪ ಜೊತೆ ಸಭೆ ನಡೆಸಿದ ಡಾ. ದೇವಿ ಶೆಟ್ಟಿ ಸಮಿತಿ ಶಾಲೆಗಳ ಪುನಾರಂಭದ ಕುರಿತಂತೆ ಬರೋಬ್ಬರಿ 92 ಪುಟಗಳ ವರದಿಯನ್ನ ಸಲ್ಲಿಸಿದೆ. ಈ ವರದಿಯಲ್ಲಿ ಶಾಲೆಯನ್ನ ತೆರೆದರೆ ಅಥವಾ ತೆರೆಯದೇ ಹೋದಲ್ಲಿ ಯಾವ್ಯಾವ ಸನ್ನಿವೇಶಗಳು ಎದುರಾಗಲಿದೆ ಅನ್ನೋದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನ ನೀಡಲಾಗಿದೆ.
ರಾಜ್ಯದಲ್ಲಿ ಶಾಲೆಗಳನ್ನ ಬಂದ್ ಮಾಡಿ ಆನ್ಲೈನ್ ತರಗತಿಗಳನ್ನ ಆರಂಭ ಮಾಡಿದಾಗಿನಿಂದ ಶೈಕ್ಷಣಿಕ ಅಸಮಾನತೆ ಹೆಚ್ಚಾಗಿದೆ. ಆನ್ಲೈನ್ ಶಿಕ್ಷಣ ಪದ್ಧತಿಯನ್ನ ಪೂರೈಸಲಾದ ಕಾರಣ ರಾಜ್ಯದಲ್ಲಿ ಮಕ್ಕಳ ಭಿಕ್ಷಾಟನೆ, ಬಾಲಕಾರ್ಮಿಕರು, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳು ಮತ್ತೆ ಹೆಚ್ಚಾಗುತ್ತಿದೆ. ಮಾತ್ರವಲ್ಲದೇ ಬಿಸಿಯೂಟದ ಕೊರತೆಯಿಂದಾಗಿ ಅಪೌಷ್ಟಿಕತೆ ಸಮಸ್ಯೆಯಿಂದಲೂ ಮಕ್ಕಳು ಬಳಲುತ್ತಿದ್ದಾರೆ ಎಂದು ಈ ವರದಿ ಹೇಳಿದೆ.
ರಾಜ್ಯದಲ್ಲಿ ಹಂತಹಂತವಾಗಿ ಶಾಲಾ – ಕಾಲೇಜುಗಳನ್ನ ಆರಂಭ ಮಾಡಬಹುದು. ಪಾಳಿ ಅಥವಾ ದಿನ ಬಿಟ್ಟು ದಿನ ಶಾಲೆ ಹಾಗೂ ಕಾಲೇಜುಗಳನ್ನ ತೆರೆಯಬಹುದಾಗಿದೆ. ದೊಡ್ಡ ಮಕ್ಕಳಿಂದ ಆರಂಭಿಸಿ ಹಂತ ಹಂತವಾಗಿ ಶಾಲೆಗಳನ್ನ ತೆರೆಯಿರಿ. ಶಾಲೆಗೆ ಬರುವ ಶಿಕ್ಷಕರು, ಭೋದಕತೇರ ಸಿಬ್ಬಂದಿ, ಶಾಲಾ ಬಸ್ ಡ್ರೈವರ್ ಸೇರಿದಂತೆ ಎಲ್ಲರಿಗೂ ಲಸಿಕೆಯನ್ನ ನೀಡಬೇಕು. ಆರೋಗ್ಯವಂತ ಮಕ್ಕಳಿಗೆ ಮಾತ್ರ ಶಾಲಾ ಆವರಣಕ್ಕೆ ಎಂಟ್ರಿ ನೀಡಬೇಕು.
ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಸಿಕ್ ರೂಂನ್ನು ಸ್ಥಾಪಿಸಬೇಕು. ಅನಾರೋಗ್ಯಕ್ಕೀಡಾದ ಮಕ್ಕಳಿಗೆ ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ನರ್ಸ್ ಹಾಗೂ ಕೌನ್ಸಿಲರ್ಗಳನ್ನ ನೇಮಕ ಮಾಡಬೇಕು. ಶಾಲೆ ಆವರಣದಲ್ಲಿಯೇ ಮಕ್ಕಳಿಗೆ ತರಗತಿಗಳನ್ನ ನಡೆಸಬೇಕು ಹಾಗೂ ಕಿಟಕಿ , ಬಾಗಿಲುಗಳನ್ನ ಸದಾ ತೆರೆದಿಡಬೇಕು. ಇಬ್ಬರು ಮಕ್ಕಳ ನಡುವೆ ಕನಿಷ್ಟ 1 ಮೀಟರ್ ಅಂತರ ಕಡ್ಡಾಯ. ಹೊರಗಿನಿಂದ ಬರುವ ಅದರಲ್ಲೂ ವಿಶೇಷವಾಗಿ 60 ವರ್ಷ ಮೇಲ್ಪಟ್ಟವರಿಗೆ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಬಾರದು. ಸೋಂಕಿನ ಲಕ್ಷಣ ಇರುವ ಮಕ್ಕಳನ್ನ ಐಸೋಲೇಟ್ ಮಾಡಬೇಕು. ಜ್ವರದ ಲಕ್ಷಣ ಹೊಂದಿರುವ ಮಕ್ಕಳಿಗೆ ಶಾಲೆಗೆ ಬರಲು ಅನುಮತಿ ನೀಡಬಾರದು ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.