ಬೆಂಗಳೂರು: ವರದಕ್ಷಿಣೆಯಾಗಿ 15 ಲಕ್ಷ ರೂ. ಕೊಡದಿದ್ದರೆ ಮೊದಲ ರಾತ್ರಿ ಕ್ಯಾನ್ಸಲ್ ಎಂದು ಪತಿ ಮತ್ತು ಆತನ ಕುಟುಂಬದವರು ಹೇಳಿದ್ದು, ವಿವಾಹಿತ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಣನಕುಂಟೆ ನಿವಾಸಿಯಾಗಿರುವ 27 ವರ್ಷದ ಮಹಿಳೆ ದೂರು ನೀಡಿದ್ದು, ಪತಿ ಅವಿನಾಶ್ ಶರ್ಮಾ ಮತ್ತು ಆತನ ಕುಟುಂಬದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವಿನಾಶ್ ಶರ್ಮಾ ಮತ್ತು ಮಹಿಳೆ 2022ರ ಜೂನ್ 6 ರಂದು ಮದುವೆಯಾಗಿದ್ದು, ಆರೋಪಿಗಳು ವರದಕ್ಷಿಣೆ ಬೇಡ ಎಂದು ಹೇಳಿದ್ದರು. ಮದುವೆಯಾಗಿ ಗಂಡನ ಮನೆಗೆ ಹೋದ ದಿನವೇ ತವರು ಮನೆಯವರು 15 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದು, ಅದನ್ನು ಕೊಡದಿದ್ದರೆ ಮೊದಲ ರಾತ್ರಿ ನಡೆಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಈ ವಿಷಯವನ್ನು ಮಹಿಳೆ ಪೋಷಕರಿಗೆ ತಿಳಿಸಿದಾಗ ಹಣ ಕೊಡಲು ಸಮಯ ಕೇಳಿ ಜೂನ್ 22ರಂದು 5.8 ಲಕ್ಷ ರೂ. ನೀಡಿದ್ದರು. ಇಷ್ಟಕ್ಕೆ ಸುಮ್ಮನಾದ ಆರೋಪಿಗಳು ಇನ್ನೂ 10 ಲಕ್ಷ ರೂಪಾಯಿ ಕೊಡದಿದ್ದರೆ ಮನೆಯಲ್ಲಿ ಇರಲು ಬಿಡಲ್ಲವೆಂದು ಬೆದರಿಸಿದ್ದರು. ಅಲ್ಲದೆ, ಸ್ನಾನ ಮಾಡುವಾಗ ಗಂಡನ ತಂದೆ ಇಣುಕಿ ನೋಡುತ್ತಿದ್ದರು. ಯಾರಿಗಾದರೂ ಹೇಳಿದರೆ ಮನೆಯಿಂದ ಹೊರಗೆ ಹಾಕುವುದಾಗಿ ಬೆದರಿಸಿದ್ದರು.
ಮಗಳಿಗೆ ಕಿರುಕುಳ ನೀಡಿದ ಬಗ್ಗೆ ಪೋಷಕರು ವಿಚಾರಿಸಿದಾಗ ನಿಮ್ಮ ಮಗಳು ನಮಗೆ ಮಾರಾಟವಾಗಿದ್ದಾಳೆ. ಆಕೆ ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ 15 ಲಕ್ಷ ರೂಪಾಯಿ ಕೊಡಬೇಕು ಎಂದು ಬೆದರಿಸಿದ್ದಾರೆ. ನಂತರ ಮಹಿಳೆ ತವರಿಗೆ ವಾಪಸ್ ಆಗಿದ್ದು, ಗಂಡನ ಮನೆಯಲ್ಲಿ ಇರುವ ತನಗೆ ಸಂಬಂಧಿಸಿದ ದಾಖಲೆಗಳನ್ನ ಪಡೆಯಲು ಹೋದಾಗ ಹಣ ಕೊಟ್ಟರೆ ದಾಖಲಾತಿ ಕೊಡುವುದಾಗಿ ಹೇಳಿದ್ದಾರೆ. ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.