ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
29 ವರ್ಷದ ರೂಪಾ ಆತ್ಮಹತ್ಯೆಗೆ ಶರಣಾದವರು. ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಸುರೇಶ್ ಎಂಬಾತನನ್ನು ರೂಪಾ ಪ್ರೀತಿಸಿ ವಿವಾಹವಾಗಿದ್ದರು. ಮನೆಯವರೇ ಸೇರಿ ರೂಪಾ ಹಾಗೂ ಸುರೇಶ್ ವಿವಾಹ ಮಾಡಿದ್ದರು. ಮದುವೆ ವೇಳೆ ರೂಪಾ ಪೋಷಕರು 100 ಗ್ರಾಂ ಚಿನ್ನ ಸಹ ನೀಡಿದ್ದರಂತೆ ಆದರೂ ಸುರೇಶ್ ನ ಕುಟುಂಬದವರು ರೂಪಾಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರಂತೆ. ಕುಟುಂಬದವರ ಕಿರುಕುಳಕ್ಕೆ ನೊಂದು ಡೆತ್ ನೋಟ್ ಬರೆದಿಟ್ಟು ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಪತಿ ಸುರೇಶ್, ಮಾವ ನರಸಿಂಹ ಮೂರ್ತಿ, ಅತ್ತೆ ದೇವಮ್ಮ ಕಾರಣ ಎಂದು ಬರೆದಿದ್ದಾರೆ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಸುರೇಶ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.