ಚಿತ್ರದುರ್ಗ: ಆಧುನಿಕ ಜಗತ್ತು ಎಷ್ಟೇ ಮುಂದುವರೆದರೂ, ಕಾನೂನಿನಲ್ಲಿ ಎಷ್ಟೇ ಬದಲಾವಣೆಗಳಾದರೂ ವರದಕ್ಷಿಣೆ ಕಿರುಕುಳ ಮಾತ್ರ ನಿಂತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪತಿ ಹಾಗೂ ಕುಟುಂಬದವರು ವರದಕ್ಷಿಣೆಗಾಗಿ ಪತ್ನಿಯನ್ನು ಮಾನಸಿಕವಾಗಿ ಇಲ್ಲವೇ ದೈಹಿಕವಾಗಿ ಹಿಂಸಿಸುವ ಪ್ರಕರಣ ಸಾಮಾನ್ಯವಾಗಿ ವರದಿಯಾಗುತ್ತಲೇ ಇರುತ್ತದೆ. ಇಲ್ಲೋರ್ವ ಮಹಿಳೆ ಪತಿ ಹಾಗೂ ಕುಟುಂಬದವರ ವರದಕ್ಷಿಣೆ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ನೇಣಿಗೆ ಕೊರಳೊಡ್ಡಿದ್ದಾರೆ. 25 ವರ್ಷದ ಪ್ರವಲ್ಲಿಕ ಆತ್ಮಹತ್ಯೆಗೆ ಶರಣಾದ ಮಹಿಳೆ.
ಪತ್ನಿ ಸಾವಿಗೆ ಶರಣಾಗುತ್ತಿದ್ದಂತೆ ಆತಂಕಗೊಂಡ ಪತಿ ಸುದರ್ಶನ್ ರೆಡ್ಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿರುವ ಆತನನ್ನು ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಪತಿ ಸುದರ್ಶನ್, ಮಾವ ಶಿವಾ ರೆಡ್ಡಿ, ಅತ್ತೆ ರಾಜೇಶ್ವರಿ ವಿರುದ್ಧ ಪ್ರಕರಣ ದಾಖಲಾಗಿದೆ.