
ಮದುವೆಯಾಗಿ ಬಂದ ಸೊಸೆ ವರದಕ್ಷಿಣೆ ಹಣ ಹಾಗೂ SUV ಕಾರು ತಂದಿಲ್ಲ ಎಂಬ ಕಾರಣಕ್ಕೆ ಅತ್ತೆ-ಮಾವ ಸೊಸೆಗೆ ಕೊಡಬಾರದ ಹಿಂಸೆ ಕೊಟ್ಟು ಬಳಿಕ ಹೆಚ್ ಐವಿ ಸೋಂಕಿನ ಇಂಜಕ್ಷನ್ ಚುಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೆಶದ ಸಹರಾನ್ ಪುರದಲ್ಲಿ ನಡೆದಿದೆ.
ಸಹರಾನ್ ಪುರ ನ್ಯಾಯಾಲಯ ಈ ಕೇಸ್ ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದೆ. 30 ವರ್ಷದ ಸಹರಾನ್ ಪುರ ನಿವಾಸಿ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ, ಅತ್ತೆ-ಮಾವ, 10 ಲಕ್ಷ ಹಣ ಹಾಗೂ SUV ಕಾರು ತಂದಿಲ್ಲ ಎಂಬ ಕಾರಣಕ್ಕೆ ಹೆಚ್ ಐ ವಿ ಸೋಂಕಿನ ಸೂಜಿ ಚುಚ್ಚಿದ್ದಾರೆ. ಹರಿದ್ವಾರದ ಅತ್ತೆ ಮನೆಯಲ್ಲಿ ಈ ಘಟನೆ ನಡೆದಿದೆ.
ಸಂತ್ರಸ್ತ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಸೂಚನೆಯಂತೆ ಮಹಿಳೆಯ ಪತಿ, ಅತ್ತೆ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆಯ ತಂದೆ ಹೇಳುವ ಪ್ರಕಾರ ಮದುವೆ ಬಳಿಕ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದಾರೆ. ಅವಾಚ್ಯವಾಗಿ ನಿಂದಿಸಿ ಅವಮಾನಿಸುತ್ತಿದ್ದರು. ಮಗನಿಗೆ ಬೇರೆ ಮದುವೆ ಮಾಡಿಸುವುದಾಗಿ ಅತ್ತೆ-ಮಾವ ಬೆದರಿಸುತ್ತಿದ್ದರು. 2023ರ ಮಾರ್ಚ್ ನಲ್ಲಿ ಮಗಳನ್ನು ಮನೆಯಿಂದ ಹೊರಹಾಕಿದ್ದಾರೆ. ಮೂರು ತಿಂಗಳ ಕಾಲ ನಮ್ಮ ಜೊತೆ ಇದ್ದ ಮಗಳು ಮತ್ತೆ ರಾಜೀ ಮಾಡಿಸಿ, ಮಾತುಕತೆ ಮೂಲಕ ಆಕೆಯ ಪತಿಯ ಮನೆಗೆ ಕಳುಹಿಸಿದ್ದೆವು. ಕೆಲ ದಿನಗಳಲ್ಲೇ ಮತ್ತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಕೆಗೆ ಚಿತ್ರ ಹಿಂಸೆ ನೀಡಲಾರಂಭಿಸಿದ್ದಾರೆ.
2024ರ ಮೇನಲ್ಲಿ ಮಗಳಿಗೆ ಆಕೆಯ ಅತ್ತೆ ಬಲವಂತವಾಗಿ ಹೆಚ್ ಐ ವಿ ಸೋಂಕಿತ ಸಿರೀಂಜ್ ಚುಚ್ಚಿದ್ದಾರೆ. ಮಗಳ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ವೈದ್ಯರು ಪರೀಕ್ಷೆ ನಡೆಸಿ ಹೆಚ್ ಐ ವಿ ಪಾಸಿಟಿವ್ ಇರುವುದನ್ನು ತಿಳಿಸಿದ್ದಾರೆ. ಘಟನೆಗಳಿಂದ ಬೇರೆ ದಾರಿ ಇಲ್ಲದೇ ಕೋರ್ಟ್ ಮೆಟ್ಟಿಲೇರಿದ್ದೆವು. ಇದೀಗ ಪತಿ, ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.