ವರದಕ್ಷಿಣೆಗಾಗಿ ಬೇಡಿಕೆ ಇಡುವುದು ಮತ್ತು ಸ್ವೀಕರಿಸುವುದು ಎರಡೂ ಶಿಕ್ಷಾರ್ಹ ಅಪರಾಧ. ಆದರೆ ಆನ್‌ಲೈನ್‌ನಲ್ಲಿ ಸಾರ್ವಜನಿಕ ಬಳಕೆಗಾಗಿ ವರದಕ್ಷಿಣೆ ಕ್ಯಾಲ್ಕುಲೇಟರ್ ಲಭ್ಯವಿದೆ. ಈ ಪೇಜ್‌ಗಳು ಆನ್‌ಲೈನ್‌ನಲ್ಲಿ ಲೋಡ್ ಆಗುತ್ತವೆ ಮತ್ತು ಇಂಟರ್ನೆಟ್ ಬಳಸುವ ಯಾವುದೇ ವ್ಯಕ್ತಿ ಇದಕ್ಕೆ ಪ್ರವೇಶಿಸಬಹುದು.
ದಶಕದ ಹಿಂದೆ Shaadi.com ನಲ್ಲಿ ವರದಕ್ಷಿಣೆ ಕ್ಯಾಲ್ಕುಲೇಟರ್ ಕಾಣಿಸಿಕೊಂಡಿತ್ತು. ಈಗ ಗೂಗಲ್‌ನಲ್ಲಿ ಅಂಥದ್ದೇ ಪೇಜ್ ಮತ್ತೆ ಪ್ರತ್ಯಕ್ಷವಾಗಿದೆ. ಮದುವೆಯಾಗಲು ಯೋಚಿಸುತ್ತಿದ್ದರೆ, ಆನ್‌ಲೈನ್ ಮೂಲಕ ಸಂಗಾತಿಯ ಹುಡುಕಾಟದಲ್ಲಿದ್ದರೆ ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದ ವರದಕ್ಷಿಣೆ ಲೆಕ್ಕ ಹಾಕಿ ಎಂಬ ಸಂದೇಶ ಈ ಕ್ಯಾಲ್ಕುಲೇಟರ್‌ನಲ್ಲಿದೆ. ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ನ ಪೇಜ್ ಇದು. ಪ್ರಾರಂಭದಲ್ಲಿ ವರದಕ್ಷಿಣೆ ಕ್ಯಾಲ್ಕುಲೇಟರ್ ವೀಕ್ಷಕರನ್ನು ಪ್ರಚೋದಿಸಲು ಸರಳವಾದ ಪ್ರಶ್ನೆಯೊಂದನ್ನು ಮುಂದಿಡುತ್ತದೆ, “ನೀವು ಎಷ್ಟು ವರದಕ್ಷಿಣೆ ಪಡೆಯುವ ಯೋಗ್ಯತೆ ಹೊಂದಿದ್ದೀರಿ?” ಎಂದು. ನಂತರ ವಯಸ್ಸು, ವೃತ್ತಿ, ಆದಾಯ ಮುಂತಾದ ವಿವರಗಳನ್ನು ಹುಡುಕುತ್ತದೆ.
ಹೇಗೆ ಕೆಲಸ ಮಾಡುತ್ತೆ ವರದಕ್ಷಿಣೆ ಕ್ಯಾಲ್ಕುಲೇಟರ್?
ವರದಕ್ಷಿಣೆ ಕ್ಯಾಲ್ಕುಲೇಟರ್‌ನಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಏನಾಗುತ್ತದೆ ಎಂಬ ಕುತೂಹಲ ಸಹಜ. ಈ ವರದಕ್ಷಿಣೆ ಕ್ಯಾಲ್ಕುಲೇಟರ್ ಜನರನ್ನು ದಾರಿ ತಪ್ಪಿಸುತ್ತದೆ. ಜಾಗೃತಿಯ ಸಂದೇಶದೊಂದಿಗೆ ಇದು ಕೊನೆಗೊಳ್ಳುತ್ತದೆ. ಇದು ವರದಕ್ಷಿಣೆ ಎಷ್ಟು ಪಡೆಯಬೇಕೆಂಬುದನ್ನು ಲೆಕ್ಕಹಾಕುವುದಿಲ್ಲ, ಬದಲಾಗಿ ಭಾರತದಲ್ಲಿ ವರದಿಯಾದ ವರದಕ್ಷಿಣೆ ಸಾವಿನ ಪ್ರಕರಣಗಳ ಸಂಖ್ಯೆಯನ್ನು ನಿಮಗೆ ತಿಳಿಸುತ್ತದೆ. “ನಮ್ಮ ಭಾರತವನ್ನು ವರದಕ್ಷಿಣೆ ಮುಕ್ತ ಸಮಾಜವಾಗಿಸೋಣ” ಎಂಬ ಸಂದೇಶ ಸಾರುತ್ತದೆ.
ಈ ವರದಕ್ಷಿಣೆ ಕ್ಯಾಲ್ಕ್ಯುಲೇಟರ್ ನೆಟ್ಟಿಗರಿಗೆ ಶಾಕ್ ಕೊಟ್ಟಿದೆ. ವರದಕ್ಷಿಣೆ ಲೆಕ್ಕ ಹಾಕಲು ಹೊರಟ ಅನೇಕರಿಗೆ ಕೊನೆಯಲ್ಲಿ ಬರುವ ಸಂದೇಶ ನೋಡಿ ಶಾಕ್ ಆಗಿದೆ. ಈ ಬುದ್ಧಿವಂತ ಟ್ವಿಸ್ಟ್ ಪ್ರಬಲ ಜಾಗೃತಿ ಅಭಿಯಾನ ಎಂದು ಕೂಡ ಅನೇಕರು ಪ್ರತಿಕ್ರಿಯಿಸಿದ್ದಾರೆ.
2011ರಲ್ಲಿ ಜನಪ್ರಿಯ ಮ್ಯಾಟ್ರಿಮೋನಿಯಲ್ ಸೈಟ್ Shaadi.com ವರದಕ್ಷಿಣೆ ತಡೆಗಾಗಿ ಚಿಂತನಶೀಲ ಅಭಿಯಾನವನ್ನು ಹೊರತಂದಿತು. ವರದಕ್ಷಿಣೆ ಕ್ಯಾಲ್ಕ್ಯುಲೇಟರ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತು. ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟವನ್ನು ನಾಶಮಾಡುವ ಗುರಿಯನ್ನು ಇದು ಹೊಂದಿದೆ.
ಆದರೆ Shaadi.com ನಲ್ಲಿದ್ದ ಈ ವರದಕ್ಷಿಣೆ ಕ್ಯಾಲ್ಕುಲೇಟರ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2018 ರಲ್ಲಿ ಸ್ವೀಕಾರಾರ್ಹವಲ್ಲ ಎಂದು ನಿರ್ಬಂಧಿಸಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಸಾಕಷ್ಟು ವಾದ ಪ್ರತಿವಾದಗಳಿಗೂ ಸಾಕ್ಷಿಯಾಗಿದೆ.