ನವದೆಹಲಿ: ಮತದಾರರ ಫೋಟೋ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಬಿಡುಗಡೆ ಮಾಡಲಿದೆ.
ರಾಷ್ಟ್ರೀಯ ಮತದಾರರ ದಿನವಾದ ಇಂದು ವೋಟರ್ ಐಡಿ ಲೋಕಾರ್ಪಣೆ ಮಾಡಲಾಗುತ್ತದೆ. ಹೊಸ ಮತದಾರರಿಗೆ ಇ ಎಪಿಕ್ ಕಾರ್ಡ್ ಗಳನ್ನು ವಿತರಿಸಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಡಿಜಿಟಲ್ ವೋಟರ್ ಐಡಿ ಗೆ ಚಾಲನೆ ನೀಡಲಿದ್ದಾರೆ.
ಚುನಾವಣಾ ಆಯೋಗದ ವೆಬ್ ಸೈಟ್ ಮತ್ತು ಆಪ್ ನಿಂದ ಡಿಜಿಟಲ್ ವೋಟರ್ ಐಡಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಕಳೆದ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಮೊಬೈಲ್ ಸಂಖ್ಯೆ ಸಹಿತ ಫಾರಂ ಸಂಖ್ಯೆ-6 ಸಲ್ಲಿಕೆ ಮಾಡಿದವರು. ಇಂದಿನಿಂದ ಜನವರಿ 31 ರವರೆಗೆ ಹಾಗೂ ಮತದಾರರ ಚೀಟಿಯಲ್ಲಿ ಹೆಸರು ಹೊಂದಿರುವ ಮೊಬೈಲ್ ನಂಬರ್ ನೋಂದಾಯಿಸಿದ ಮತದಾರರು ಫೆಬ್ರವರಿ 1 ರಿಂದ ಡಿಜಿಟಲ್ ವೋಟರ್ ಐಡಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
Voterportal.ed.gov.in, nvsp.in ವೆಬ್ಸೈಟ್ ಮತ್ತು ಮತದಾರರ ಸಹಾಯವಾಣಿ ಆಪ್ ಮೂಲಕ ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಪಿಡಿಎಫ್ ರೂಪದಲ್ಲಿ ಇರಲಿದ್ದು, ತಿರುಚಲು ಸಾಧ್ಯವಿಲ್ಲ. ಡಿಜಿ ಲಾಕರ್ ಆಪ್ ನಲ್ಲಿ ಇದನ್ನು ಸಂಗ್ರಹಿಸಬಹುದು. ಅಗತ್ಯವಿದ್ದಾಗ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.