ತಮಿಳುನಾಡಿನ ಚೆನ್ನೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಪ್ರೀತಿಗೆ ಯುವತಿ ಒಪ್ಪಲಿಲ್ಲವೆಂಬ ಕಾರಣಕ್ಕೆ ಪಾಪಿಯೊಬ್ಬ ಆಕೆ ಕಾಲೇಜಿಗೆ ತೆರಳಲು ರೈಲು ನಿಲ್ದಾಣದಲ್ಲಿರುವಾಗ ಚಲಿಸುತ್ತಿರುವ ರೈಲಿನ ಮುಂದೆ ಆಕೆಯನ್ನು ತಳ್ಳಿ ಹತ್ಯೆ ಮಾಡಿದ್ದು, ಈ ವಿಷಯ ತಿಳಿದ ಆಕೆಯ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಗುರುವಾರದಂದು ಸೇಂಟ್ ಥಾಮಸ್ ಮೌಂಟ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿ ಸತ್ಯಾ ಎಂಬಾಕೆಯನ್ನು ರೈಲಿನ ಮುಂದೆ ತಳ್ಳಿ ಸತೀಶ ಎಂಬಾತ ಹತ್ಯೆ ಮಾಡಿದ್ದ. ಈ ವಿಷಯ ಆಕೆಯ ತಂದೆ ಮಾಣಿಕ್ಯಂ ಎಂಬವರಿಗೆ ತಿಳಿದ ಬಳಿಕ ಅಂದು ರಾತ್ರಿಯೇ ತಮ್ಮ ಮನೆ ಮುಂದೆ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗಿದ್ದಾರೆ.
ಸತ್ಯಾ ತಾಯಿ ರಾಮಲಕ್ಷ್ಮಿ ಪೊಲೀಸ್ ಪೇದೆಯಾಗಿದ್ದು, ತಂದೆ ಮಾಣಿಕ್ಯಂ ಚಾಲಕರಾಗಿದ್ದರು. ಆರೋಪಿ ಸತೀಶನ ತಂದೆ ನಿವೃತ್ತ ಸಬ್ ಇನ್ಸ್ಪೆಕ್ಟರ್ ಆಗಿದ್ದು, ಅವರು ವೃತ್ತಿಯಲ್ಲಿದ್ದ ವೇಳೆ ಸತ್ಯಾ ಕುಟುಂಬ ಹಾಗೂ ಸತೀಶ್ ಕುಟುಂಬ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಇದ್ದರು ಎಂದು ಹೇಳಲಾಗಿದೆ.
ಆಗಿನಿಂದಲೇ ಸತೀಶ್, ಸತ್ಯಾಗೆ ಕಿರುಕುಳ ನೀಡುತ್ತಿದ್ದು ಈ ಕುರಿತಂತೆ ಎರಡು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದರಿಂದಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಸತೀಶ್, ಗುರುವಾರದಂದು ಚಲಿಸುತ್ತಿರುವ ರೈಲಿನ ಮುಂದೆ ಸತ್ಯಾಳನ್ನು ತಳ್ಳಿ ಕೊಲೆ ಮಾಡಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.