ಚೆನ್ನೈ: ನೀಟ್ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಸಾವಿನಿಂದ ಆಘಾತಕ್ಕೊಳಗಾದ ತಂದೆ ಕೂಡ ನೇಣಿಗೆ ಕೊರಳೊಡ್ಡಿದ ಘಟನೆ ನಡೆದಿದೆ.
ತಮಿಳುನಾಡಿನ ಚೆನ್ನೈನ ಕ್ರೋಮಾಪೇಟ್ ನಲ್ಲಿ ಈ ದುರಂತ ಸಂಭವಿಸಿದೆ. ಸತತ ಪ್ರಯತ್ನದ ಬಳಿಕ ಎರಡನೇ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತೀವ್ರವಾಗಿ ಮನನೊಂದಿದ್ದ 19 ವರ್ಷದ ಜಗದೀಶ್ವರ್ ಶನಿವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಗದೀಶ್ವರ್ ಖಾಸಗಿ ನೀಟ್ ಬೋಧನಾ ಕೇಂದ್ರದಲ್ಲಿ ಕೋಚಿಂಗ್ ಪಡೆದಿದ್ದ. ಸತತ ಎರಡನೇ ಪ್ರಯತ್ನದಲ್ಲಿಯೂ ನೀಟ್ ನಲ್ಲಿ ಫೇಲಾಗಿದ್ದ. ಆತನ ತಂದೆ ಮೂರನೇ ಪ್ರಯತ್ನಕ್ಕಾಗಿ ಇನ್ನೊಂದು ಕೋಚಿಂಗ್ ಸೆಂಟರ್ ಗೆ ಮಗನನ್ನು ಸೇರಿಸಲು ಯತ್ನಿಸಿದ್ದರು. ಅಲ್ಲದೇ ಅರ್ಜಿ ಕೂಡ ತುಂಬಿದ್ದರು. ಆದರೆ ನೀಟ್ ನಲ್ಲಿ ತಾನು ಸೆಲೆಕ್ಟ್ ಆಗಲು ಸಾಧ್ಯವೇ ಇಲ್ಲ ಎಂದು ಭಾವಿಸಿ ಮಾನಸಿಕವಾಗಿ ಕುಸಿದು ಹೋಗಿದ್ದ ವಿದ್ಯಾರ್ಥಿ ದುಡುಕಿನ ನಿರ್ಧಾರ ಮಾಡಿದ್ದಾನೆ. ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಗನ ಸಾವಿನಿಂದ ತಂದೆ ಕಂಗೆಟ್ಟಿದ್ದಾರೆ. ಭಾನುವಾರ ಮಗನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದ ತಂದೆ ಕೂಡ ನೇಣಿಗೆ ಕೊರಳೊಡ್ಡಿದ್ದಾರೆ. ಮಗನ ಬೆನ್ನಲ್ಲೇ ತಂದೆಯೂ ಸಾವಿಗೆ ಶರಣಾಗಿದ್ದು, ಕುಟುಂಬ ಆಘಾತಕ್ಕೊಳಗಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.