ಇದು ಆನ್ಲೈನ್ ಯುಗ. ಸರ್ಕಾರಿ ಹಾಗೂ ಖಾಸಗಿಯ ಅನೇಕ ಸೇವೆಗಳು ಈಗ ಅಂತರ್ಜಾಲದಲ್ಲಿ ಲಭ್ಯವಿದೆ. ತರಕಾರಿ, ಬೇಳೆ, ಆಹಾರ ಸೇರಿದಂತೆ ಎಲ್ಲ ಸೇವೆಗಳು ಆನ್ಲೈನ್ ನಲ್ಲಿ ಲಭ್ಯವಿದೆ. ಈಗ ಹೊಸ ಸಿಮ್ ಕಾರ್ಡ್ ಕೂಡ ಆನ್ಲೈನ್ ನಲ್ಲಿ ಲಭ್ಯವಿದೆ.
ಸಿಮ್ ಕಾರ್ಡ್ ಪಡೆಯಲು ಇನ್ಮುಂದೆ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ. ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ನಕಲನ್ನು ನೀಡಿ, ಸಿಮ್ ಪಡೆಯಬೇಕಾಗಿಲ್ಲ. ಈಗ ಸ್ವಯಂ ಕೆವೈಸಿ ವ್ಯವಸ್ಥೆಗೆ ಒಪ್ಪಿಗೆ ನೀಡಲಾಗಿದೆ.
ಸ್ವಯಂ-ಕೆವೈಸಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವಂತೆ ಟೆಲಿಕಾಂ ಇಲಾಖೆ ಜನರಿಗೆ ಮನವಿ ಮಾಡಿದೆ. ಮೊಬೈಲ್ ಸಿಮ್ ಪಡೆಯಲು ಗ್ರಾಹಕರು, ಕಂಪನಿಯ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ನೋಂದಣಿಗಾಗಿ, ಗ್ರಾಹಕರು ಪರ್ಯಾಯ ಸಂಖ್ಯೆಯನ್ನು ನೀಡಬೇಕು. ಯಾವುದೇ ಪರ್ಯಾಯ ಸಂಖ್ಯೆ ಇಲ್ಲದಿದ್ದರೆ, ಸಂಬಂಧಿಕರ ಸಂಖ್ಯೆ ಸಹ ನೀಡಬಹುದು. ಆ ಸಂಖ್ಯೆಗೆ ಒಟಿಪಿ ಬಂದ ನಂತ್ರ ಗ್ರಾಹಕರ ಹೆಸರು ನೋಂದಾಯಿಸಲಾಗುತ್ತದೆ. ಒಟಿಪಿ ಮೂಲಕ ಲಾಗಿನ್ ಮಾಡಲು ಸಾಧ್ಯವಾಗುತ್ತದೆ.
ಆಪ್ನಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಗ್ರಾಹಕರು ಸ್ವಯಂ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಈಗಾಗಲೇ ಸಿಮ್ ಗಳನ್ನು ಮನೆಗೆ ಡಿಲೆವರಿ ಮಾಡ್ತಿವೆ. ವೊಡಾಫೋನ್-ಐಡಿಯಾ ಕೂಡ ಸಿಮ್ ಹೋಮ್ ಡೆಲಿವರಿ ಶುರು ಮಾಡಿದೆ.