ಬೆಂಗಳೂರು: ರಾಜ್ಯದ ಜನತೆಗೆ ಸುಲಭವಾಗಿ ಸರ್ಕಾರಿ ಸೇವೆ ಒದಗಿಸಲು ಮನೆ ಬಾಗಿಲಿಗೆ ಜನ ಮಿತ್ರರು ಆಗಮಿಸಲಿದ್ದಾರೆ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ ಯಾವುದೇ ಸೇವೆ ಪಡೆದುಕೊಳ್ಳಲು ಸಮಯ, ಶ್ರಮ, ಹಣ, ವ್ಯಯ ಮಾಡಿಕೊಂಡು ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಇ- ಆಡಳಿತ ಇಲಾಖೆಯ ಮೂಲಕ ಜನಮಿತ್ರರ ನೇಮಕಕ್ಕೆ ನಿರ್ಧಾರ ಕೈಗೊಂಡಿದೆ.
ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಜನರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ಜನ ಮಿತ್ರರ ಸೇವೆ ಪಡೆಯಲು ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬೇಕು. ಹೆಸರು ಮತ್ತು ಪಿನ್ ಕೋಡ್ ಪಡೆದು ನೋಂದಣಿ ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ನೀಡಲಾಗುವುದು. ಜನಮಿತ್ರ ಆಪ್ ಮೂಲಕ ಜನಮಿತ್ರರಿಗೆ ಮಾಹಿತಿ ಕಳುಹಿಸಲಾಗುತ್ತದೆ. ಒಂದು ಗಂಟೆಯೊಳಗೆ ಸಂಬಂಧಿಸಿದ ನಾಗರೀಕರನ್ನು ಜನಮಿತ್ರ ಭೇಟಿ ಮಾಡುತ್ತಾರೆ.
ಆದಾಯ, ಜಾತಿ ಪ್ರಮಾಣ ಪತ್ರ, ರಸಗೊಬ್ಬರಕ್ಕೆ ಅರ್ಜಿ, ವಿವಿಧ ಲೈಸೆನ್ಸ್ ನವೀಕರಣ, ಪರಿಹಾರ ನಿಧಿಗೆ ಅರ್ಜಿ, ಟ್ರೇಡ್ ಲೈಸೆನ್ಸ್, ಮಣ್ಣಿನ ಗುಣಮಟ್ಟ ಪರೀಕ್ಷೆ, ಅಂಕಪಟ್ಟಿ, ಪೊಲೀಸರಿಗೆ ದೂರು, ಮರಣ ಪ್ರಮಾಣ ಪತ್ರ, ಪಿಂಚಣಿ ಅರ್ಜಿ ಸಲ್ಲಿಕೆ ವಿವಿಧ ಸೇವೆಗಳನ್ನು ಜನಮಿತ್ರರ ಮೂಲಕ ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದು.
ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ ಎರಡರಿಂದ ನಾಲ್ಕು ಜನ ಮಿತ್ರರನ್ನು ನೇಮಿಸಲಿದ್ದು, ರಾಜ್ಯಾದ್ಯಂತ ಸುಮಾರು 25 ಸಾವಿರ ಜನಮಿತ್ರರ ನೇಮಕ ಮಾಡಲಾಗುವುದು. 10ನೇ ತರಗತಿ ಓದಿದ, ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸವಾಗಿರುವ, ಚಾಲನಾ ಪರವಾನಿಗೆ ಹೊಂದಿರಬೇಕು. ಇದಕ್ಕಾಗಿ ಪ್ರೋತ್ಸಾಹಧನ ನೀಡಲಾಗುವುದು.
ಅರ್ಜಿ ಸಲ್ಲಿಕೆ ಮತ್ತು ಸೇವೆ ಮನೆ ಬಾಗಿಲಿಗೆ ತಲುಪಿಸಲು ಅರ್ಜಿ ಶುಲ್ಕದ ಜೊತೆಗೆ 50ರೂ. ಪ್ರಮಾಣ ಪತ್ರ ವಿತರಣೆಗೆ ಶುಲ್ಕದ ಜೊತೆಗೆ 25 ರೂ. ನಿಗದಿ ಮಾಡಲಾಗುವುದು. ಶುಲ್ಕ ಸರ್ಕಾರಕ್ಕೆ ಬಂದರೆ ಉಳಿದ ಮೊತ್ತ ಜನಮಿತ್ರರಿಗೆ ಸಿಗಲಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುವುದಿಲ್ಲ. ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಕಂದಾಯ ವಿಭಾಗಗಳ ತಲಾ ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಿ ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.