ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ” ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಪೋಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಿಂದ ಮಾರ್ಚ್ 12 ರಂದು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ತಿಳಿಸಿದ್ದಾರೆ.
ಅವರು ಗುಂಗಿರ್ಲಹಳ್ಳಿ ಗ್ರಾಮಕ್ಕೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳೊಂದಿಗೆ ಭೇಟಿ ನೀಡಿ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಯ ಚಾಲನೆ ನೀಡುವ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ವಿಶೇಷತೆ
ರೈತರ ಹಕ್ಕನ್ನು / ಅರ್ಹತೆಯನ್ನು ನಿರ್ಧರಿಸುವ ಮೂಲ ಕಂದಾಯ ದಾಖಲೆಗಳಾದ ಪಹಣಿ ಮತ್ತು ಅಟ್ಲಾಸ್ಗಳು ಭೂಮಿ ಮತ್ತು ಮೋಜಣಿ ತಂತ್ರಾಂಶಗಳಲ್ಲಿ ಲಭ್ಯವಿದ್ದು ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಇ-ಕ್ಷಣ ತಂತ್ರಾಂಶದಲ್ಲಿ ಲಭ್ಯವಿದ್ದು, ಸದರಿ ತಂತ್ರಾಂಶಗಳಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕುಟುಂಬವಾರು ಪಡೆದು ಸದರಿ ದಾಖಲೆಗಳನ್ನು ಲಕೋಟೆಯಲ್ಲಿರಿಸಿ ಕಂದಾಯ ಇಲಾಖೆ ವತಿಯಿಂದ ರಾಜ್ಯದ ಪ್ರತೀ ರೈತ ಕುಟುಂಬದ ಮನೆ ಬಾಗಿಲಿಗೆ ಹಾಗೂ ಫಲಾನುಭವಿಗಳಿಗೆ ಉಚಿತವಾಗಿ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಗುಂಗಿರ್ಲಹಳ್ಳಿ(ಮಜರೆ) ಗ್ರಾಮದಲ್ಲಿ 171 ಕುಟುಂಬಗಳಿದ್ದು 977 ಜನರು ವಾಸವಿದ್ದಾರೆ, ಈ ಪೈಕಿ 157 ಖಾತೆದಾರರಿದ್ದಾರೆ. 977 ಜನಸಂಖ್ಯೆಯುಳ್ಳ ಈ ಕುಗ್ರಾಮಕ್ಕೆ ಮುಖ್ಯಮಂತ್ರಿಗಳು ಆಗಮಿಸಿ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹಾಗೂ ಇತರೆ ದಾಖಲೆಗಳನ್ನು ಖುದ್ದಾಗಿ ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸುವ ಮೂಲಕ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ತಾಲ್ಲೂಕಿನ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ತಾಲ್ಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್, ಪಿಡಿಓ ಮಂಜುನಾಥ್, ಸ್ಥಳೀಯ ಪ್ರತಿನಿಧಿಗಳು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.