alex Certify ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ, ಜನವರಿಯಿಂದ ಜನರ ಮನೆ ಬಾಗಿಲಿಗೆ ಪಡಿತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ, ಜನವರಿಯಿಂದ ಜನರ ಮನೆ ಬಾಗಿಲಿಗೆ ಪಡಿತರ

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಂಪರ್ಕ ಇರುವ ಎಲ್ಲ ಸಂಸ್ಥೆಗಳು ಸಮರ್ಪಕವಾಗಿ  ಕಾರ್ಯನಿರ್ವಹಿಸಿದಾಗ ಮಾತ್ರ ಜನಪರ ಸರ್ಕಾರ ಆಗುತ್ತದೆ. ಈ ತತ್ವದ ಹಿನ್ನೆಲೆಯಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮಾತ್ರವಲ್ಲ, ಇಡೀ ಸರ್ಕಾರವೇ ಗ್ರಾಮಗಳ ಕಡೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ- ಗ್ರಾಮ ವಾಸ್ತöವ್ಯ ಕಾರ್ಯಕ್ರಮ ಹಾಗೂ ವಿವಿಧ ಸೌಲಭ್ಯಗಳ ವಿತರಣೆ, ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಮನೆ ಬಾಗಿಲಿಗೆ ಪಡಿತರ:

ಜನವರಿ 26 ರ ನಂತರ ಪಡಿತರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದ ಸಿಎಂ, ಸಾಮಾಜಿಕ ಭದ್ರತೆ ಮನೆ ಬಾಗಿಲಿಗೆ ಬರಬೇಕು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎಲ್ಲ ಸೌಲಭ್ಯಗಳು ದೊರಕಲು ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ನವೆಂಬರ್ 1 ರಂದು ಜನಸೇವಕ ಕಾರ್ಯಕ್ರಮವನ್ನು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ಸೌಲಭ್ಯಗಳನ್ನು ಮೊಬೈಲ್ ಮೂಲಕ ದೊರಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಿಂಚಣಿ ಸೌಲಭ್ಯ ಆನ್‌ಲೈನ್ ನಲ್ಲಿ ಈಗಾಗಲೇ ಲಭ್ಯವಿದೆ. ಇದು ಲಭ್ಯವಾಗುವಲ್ಲಿ ತೊಂದರೆಯಾದರೆ, ತಾಲ್ಲೂಕು ಕಚೇರಿಗೆ ಹೋಗಬೇಕಾಗಿಲ್ಲ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಇರುವ ಕೇಂದ್ರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜನರ ಸೇವೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು, ಗ್ರಾಮ ಪಂಚಾಯತಿಯ ಅಧಿಕಾರಿಗಳು ಭಾಗವಹಿಸಬೇಕು ಎಂದರು.

ಅಧಿಕಾರ ಹೆಪ್ಪುಗಟ್ಟಿ ವಿಧಾನಸಭೆಯಲ್ಲಿ ಕುಳಿತುಕೊಳ್ಳದೆ, ಜೇನುತುಪ್ಪವಾಗಿ ಗ್ರಾಮೀಣ ಪ್ರದೇಶಕ್ಕೆ ಹರಿಯಬೇಕೆನ್ನುವ ಕಲ್ಪನೆ ನಮ್ಮದು. ಕಾಲ ಬದಲಾಗಿದ್ದು, ಜನರು ಜಾಗೃತರಾಗಿದ್ದಾರೆ. ಸ್ಪಂದನಶೀಲ ಸರ್ಕಾರ ಕರ್ನಾಟಕದಲ್ಲಿದೆ. ಸ್ವಚ್ಚ, ದಕ್ಷ, ಜನಪರ ಆಡಳಿತವನ್ನು ನಾವು ಕೊಡುತ್ತೇವೆ. ಅದರ ಲಾಭವನ್ನು ಜನ ಪಡೆಯಬೇಕು ಎಂದು ತಿಳಿಸಿದರು.

ನಮ್ಮ ಸರ್ಕಾರ ಬಡವರಿಗೆ 4 ಲಕ್ಷ ಮನೆಗಳನ್ನು ಕೇವಲ ಒಂದೂವರೆ ವರ್ಷದಲ್ಲಿ ಕಟ್ಟಿದ್ದು, ನಗರಗಳ ಕೊಳಗೇರಿಯಲ್ಲಿರುವವರಿಗೆ 1  ಲಕ್ಷ ಮನೆಗಳನ್ನು ಕಟ್ಟಿ ಕೊಡಲಾಗುತ್ತಿದೆ. ಜಲ್ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು 2 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಅಮೃತ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಸಮಗ್ರ ಅಭಿವೃದ್ಧಿಯ ಕಲ್ಪನೆಯನ್ನು ಸರ್ಕಾರ ಹೊಂದಿದ್ದು, ಉದ್ಯಮ, ಉದ್ಯೋಗಕ್ಕೆ ಸಮಾನ  ಮಹತ್ವವನ್ನು ನೀಡಿದೆ. ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ನ್ಯಾಮತಿಗೆ ಮಿನಿ ವಿಧಾನಸೌಧ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...