ಬೆಂಗಳೂರು: ಒಳ ಮೀಸಲಾತಿ ಜಾರಿ ನಿರ್ಧಾರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಭಾಗ್ಯದ ಬಾಗಿಲು ತೆರೆದಿದ್ದಾರೆ. ಈ ಕುರಿತು ರಚಿಸಲಾದ ಏಕ ಸದಸ್ಯ ಆಯೋಗ ಮೂರು ತಿಂಗಳಲ್ಲಿ ವರದ ನೀಡಲಿದ್ದು, ನಾಲ್ಕನೇ ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೆ ಬರಲಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಮೂರು ತಿಂಗಳ ಬಳಿಕ ಶೀಘ್ರವೇ ಜಾರಿಗೆ ಬರಲಿದೆ. ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ, 30 ವರ್ಷ ಕಾದಿದ್ದೇವೆ. ಇನ್ನು ಮೂರು ತಿಂಗಳು ತಾಳ್ಮೆ ವಹಿಸಿದರೆ ಸಿಹಿ ಸುದ್ದಿ ಸಿಗಲಿದೆ ಎಂದು ಸಮುದಾಯದವರಿಗೆ ಕರೆ ನೀಡಿದ್ದಾರೆ.
ಒಳ ಮೀಸಲಾತಿ ವಿಚಾರದಲ್ಲಿ ಹೋರಾಟಗಾರರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರದ ಸ್ವಾತಂತ್ರ್ಯ ಎಂದುಕೊಂಡು ಮನಸ್ಸಿಗೆ ಬಂದಂತೆ ಟೇಕಿಸಬಾರದು. ಒಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಟೀಕೆ ಮಾಡಬಾರದು. ಸಮಾಜದ ಜನತೆಗೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು ಎಂದು ತಮ್ಮ ಸಮುದಾಯದವರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ, ಕೆಪಿಸಿಸಿ ಸಂಯೋಜಕ ಮಂಜೇಶ್ ಉಪಸ್ಥಿತರಿದ್ದರು.