2023-24ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು 31ರಂದೇ ಅಂತ್ಯವಾಗಿದೆ. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ ಜುಲೈ 31ರವರೆಗೆ ಸುಮಾರು 7.28 ಕೋಟಿ ITR ಠೇವಣಿಗಳನ್ನು ಸಲ್ಲಿಸಲಾಗಿದೆ. ಕೊನೆಯ ಕ್ಷಣದಲ್ಲಿ ರಿಟರ್ನ್ಸ್ ಸಲ್ಲಿಸಿದವರಿಗೆ ಐಟಿಆರ್ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲಾಗಿದ್ದು, ಹಣ ಕೂಡ ಅವರ ಖಾತೆಗಳಿಗೆ ಜಮಾ ಆಗಿದೆ. ಆದರೆ ಗಡುವಿಗೂ ಮುನ್ನವೇ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಸಲ್ಲಿಸಿದ ಅನೇಕರಿಗೆ ಇದುವರೆಗೂ ಮರುಪಾವತಿಯಾಗಿಲ್ಲ.
ಆದಾಯ ತೆರಿಗೆ ರಿಟರ್ನ್ ಮರುಪಾವತಿ ವಿಳಂಬವೇಕೆ?
ಕೆಲವರು ಐಟಿಆರ್ ಸಲ್ಲಿಸಿದ 24 ಗಂಟೆಯೊಳಗೆ ಹಣ ವಾಪಸ್ ಪಡೆದಿದ್ದಾರೆ. ಆದರೆ ಇನ್ನು ಕೆಲವರಿಗೆ ತಿಂಗಳು ಕಳೆದರೂ ಹಣ ಜಮಾ ಆಗಿಲ್ಲ. ಈ ಮರುಪಾವತಿ ವಿಳಂಬದ ಹಿಂದೆ ಹಲವು ಕಾರಣಗಳಿರಬಹುದು.
ITR-1 ಅಥವಾ ITR-4 ನಂತಹ ಸರಳ ವಿಧಾನಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ. ಹಾಗಾಗಿ ಅಂತಹ ತೆರಿಗೆದಾರರು ಬೇಗ ಮರುಪಾವತಿ ಮೊತ್ತ ಪಡೆಯುತ್ತಾರೆ. ITR-2 ಅಥವಾ ITR-3 ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಮರುಪಾವತಿಯ ಮೊತ್ತ ಹೆಚ್ಚಾಗಿದ್ದಲ್ಲಿ ಕೂಡ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಆದಾಯ ತೆರಿಗೆ ಇಲಾಖೆಯು ಎಲ್ಲಾ ವಿವರಗಳನ್ನು ವಿವರವಾಗಿ ಪರಿಶೀಲಿಸಿದ ಬಳಿಕ ಮರುಪಾವತಿ ಮಾಡುತ್ತದೆ.
ರಿಟರ್ನ್ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದಲ್ಲಿ ಕೂಡ ಸಮಸ್ಯೆಯಾಗಬಹುದು. ತಪ್ಪು ಮಾಹಿತಿಯಿದ್ದಲ್ಲಿ ಅದನ್ನು ಸರಿಪಡಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ತಪ್ಪಾದ ಬ್ಯಾಂಕ್ ಖಾತೆ ಮಾಹಿತಿ, IFSC ಕೋಡ್, ಮೈಕ್ರೋ ಕೋಡ್ ಅಥವಾ ಖಾತೆದಾರರ ಹೆಸರಿನ ಕಾರಣದಿಂದಾಗಿ ಮರುಪಾವತಿ ವಿಳಂಬವಾಗಬಹುದು.
ಇದರ ಹೊರತಾಗಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸದಿದ್ದಲ್ಲಿ ಕೂಡ ವಿಳಂಬವಾಗಬಹುದು. ಮುಂಚಿತವಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಇದಲ್ಲದೆ KYC ಅಪೂರ್ಣ ಕೂಡ ಮರುಪಾವತಿ ವಿಳಂಬಕ್ಕೆ ಕಾರಣ.
ಈಗಾಗಲೇ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿರುವವರಿಗೆ ಇಲಾಖೆಯಿಂದ SMS ಮತ್ತು ಇಮೇಲ್ ಮೂಲಕ ಮಾಹಿತಿ ಲಭ್ಯವಾಗುತ್ತದೆ. ಈ ಮೆಸೇಜ್ ಸ್ವೀಕರಿಸಿದ 2-3 ದಿನಗಳ ನಂತರ ಮರುಪಾವತಿಯನ್ನು ಪಡೆಯುತ್ತೀರಿ.
ಸ್ಟೇಟಸ್ ಪರಿಶೀಲಿಸುವುದು ಹೇಗೆ?
ತೆರಿಗೆ ರಿಟರ್ನ್ಸ್ ಮರುಪಾವತಿ ಬಂದಿಲ್ಲ ಎಂದಾದಲ್ಲಿ ಅದರ ಸ್ಟೇಟಸ್ ಏನು ಎಂಬುದನ್ನು ಪರಿಶೀಲಿಸಬಹುದು. ಇದಕ್ಕಾಗಿ www.incometax.gov.in ವೆಬ್‌ಸೈಟ್‌ಗೆ ವಿಸಿಟ್ ಮಾಡಿ. ಪ್ಯಾನ್ ಕಾರ್ಡ್ ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ. ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಆದ ನಂತರ, ‘ಇ-ಫೈಲ್ ಟ್ಯಾಬ್’ ಗೆ ಹೋಗಿ. ‘ಫೈಲ್ ಮಾಡಿದ ರಿಟರ್ನ್ ವೀಕ್ಷಿಸಿ’ ಆಯ್ಕೆಯನ್ನು ಆರಿಸಿಕೊಳ್ಳಿ. ಅಲ್ಲಿ ನಿಮ್ಮ ITR ರಿಟರ್ನ್‌ನ ವಿವರಗಳನ್ನು ನೋಡಬಹುದು. ಮರುಪಾವತಿಯ ಪ್ರಸ್ತುತ ಸ್ಥಿತಿಯನ್ನು ನೋಡಲು ‘ವಿವರಗಳನ್ನು ವೀಕ್ಷಿಸಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮಾಹಿತಿ ಲಭ್ಯವಾಗುತ್ತದೆ.