ಕಾಶ್ಮೀರ: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪನದ ಕಂಪನಗಳಿಂದ ಉತ್ತರ ಭಾರತದ ಹಲವು ಭಾಗಗಳು ನಡುಗಿವೆ. ಏನಾಗುತ್ತಿದೆ ಎಂದು ತಿಳಿದ ಕೂಡಲೇ ಜನರು ತಮ್ಮ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಹೆರಿಗೆ ಮಾಡುತ್ತಿದ್ದ ವೈದ್ಯರ ಗುಂಪೊಂದು ಇದಕ್ಕೆ ಹೆದರದೇ ತಮ್ಮ ಕರ್ತವ್ಯ ಮುಂದುವರೆಸಿರುವ ಕಾಶ್ಮೀರದ ವಿಡಿಯೋ ವೈರಲ್ ಆಗಿದೆ.
ವಿದ್ಯುತ್ ಸ್ಥಗಿತಗೊಂಡರೂ, ಭೂಮಿ ಅಲ್ಲಾಡುತ್ತಿದ್ದರೂ, ವೈದ್ಯರು ತಮ್ಮ ಜೀವವನ್ನು ಲೆಕ್ಕಿಸದೇ ಕಾರ್ಯವನ್ನು ಮುಂದುವರೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಅವರು ತಾಯಿಯಾಗಲಿರುವವರಿಗೆ ಸಾಂತ್ವನ ಹೇಳುವುದನ್ನು ಸಹ ಕೇಳಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ವೈದ್ಯಕೀಯ ತಂಡದ ವೃತ್ತಿಪರತೆಯನ್ನು ಹೊಗಳುತ್ತಿದ್ದಾರೆ.
ಅನಂತ್‌ನಾಗ್‌ನ ಮುಖ್ಯ ವೈದ್ಯಕೀಯ ಅಧಿಕಾರಿಯ ಅಧಿಕೃತ ಹ್ಯಾಂಡಲ್‌ನಿಂದ ಕ್ಲಿಪ್ ಅನ್ನು ಮೊದಲು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಡುಕದಿಂದಾಗಿ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಅದರಲ್ಲಿರುವ ವೈದ್ಯಕೀಯ ಉಪಕರಣಗಳು ಅಲುಗಾಡುತ್ತಿರುವುದನ್ನು ನೋಡಬಹುದು. ಮುಂದೆ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಆದಾಗ್ಯೂ, ವೈದ್ಯರು ಹತ್ತಿರದ ಮಾನಿಟರ್‌ನಿಂದ ಪಡೆಯುವ ಕಡಿಮೆ ಬೆಳಕನ್ನು ಬಳಸಿಕೊಂಡು ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ.