ಬೆಂಗಳೂರು: ಯಾರಿಗಾದರೂ ಪಾರ್ಶ್ವವಾಯು ಆದಾಗ ಒಂದು ಕ್ಷಣವೂ ವ್ಯರ್ಥ ಮಾಡಬಾರದು, ಕೂಡಲೇ ಚಿಕಿತ್ಸೆ ಕೊಡಿಸಿ : ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಿಎಂ ಹೆಚ್ .ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬಂದಿದ್ದು, ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಪಾರ್ಶ್ವವಾಯು ಆದಾಗ ಕೂಡಲೇ ಚಿಕಿತ್ಸೆ ಕೊಡಿಸಿ. ಹಣದ ಬಗ್ಗೆ ಯೋಚಿಸಬೇಡಿ, ಜೀವ ಉಳಿಸಿ. ಒಂದು ವೇಳೆ ನಾನು ನಿರ್ಲಕ್ಷ್ಯ ಮಾಡಿದ್ದರೇ ಬೆಡ್ ಮೇಲೆಯೇ ಇರಬೇಕಾಗಿತ್ತು. ಸದ್ಯ ಭಗವಂತ ಉಳಿಸಿದ್ದಾನೆ. ಯಾರೂ ಸಹ ಪಾರ್ಶ್ವವಾಯುವನ್ನು ನಿರ್ಲಕ್ಷಿಸಬೇಡಿ…ಬೇಗ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು.
ಭಗವಂತನ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ದೇವರು, ತಂದೆ, ತಾಯಿ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ತಂದೆ-ತಾಯಿ ಆಶೀರ್ವಾದದಿಂದ ಪುನರ್ಜನ್ಮ ಸಿಕ್ಕಿದೆ, ಅಪೋಲೋ ಆಸ್ಪತ್ರೆ ವೈದ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ತೀವ್ರ ಜ್ವರದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬಂದಿದ್ದು, ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.