ನವದೆಹಲಿ: ಎಐಎಂಐಎಂ ಪಕ್ಷದ ಮುಖ್ಯ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಕಾರ್ ಮೇಲೆ ಗುಂಡಿನ ದಾಳಿ ನಡೆಸಿದ ಬಗ್ಗೆ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ.
ನನಗೆ Z ಸೆಕ್ಯೂರಿಟಿ ಬೇಕಾಗಿಲ್ಲ. A ಕೆಟಗರಿ ನಾಗರಿಕನನ್ನಾಗಿ ಮಾಡಿ ಸಾಕು, ಈ ಘಟನೆಯನ್ನು ನಾನು ರಾಜಕೀಯಗೊಳಿಸುವುದಿಲ್ಲ. ಘಟನೆಯ ಹಿಂದೆ ಮೂಲಭೂತವಾದಿಗಳ ಕೈವಾಡವಿದೆ. ನಾನು ಸಾವಿಗೆ ಹೆದರುವುದಿಲ್ಲ. ನಾನು ಝಡ್ ಸೆಕ್ಯೂರಿಟಿಯನ್ನು ಬಯಸುವುದಿಲ್ಲ. ದಯವಿಟ್ಟು ನನಗೆ ನ್ಯಾಯ ಕೊಡಿ ಎಂದು ಹೇಳಿದ್ದಾರೆ.
UAPA ಅಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಲೋಕಸಭೆಯಲ್ಲಿ ಈ ಬಗ್ಗೆ ಓವೈಸಿ ಪ್ರಸ್ತಾಪಿಸಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ಘಟನೆಯ ಬಗ್ಗೆ ವಿವರ ನೀಡಲಿದ್ದಾರೆ.
ನಿನ್ನೆ ಸಂಸದ ಓವೈಸಿ ಕಾರ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಉತ್ತರ ಪ್ರದೇಶದ ಮೀರತ್ ನಿಂದ ಚುನಾವಣೆ ಪ್ರಚಾರ ಮುಗಿಸಿ ಬರುವಾಗ ದಾಳಿ ನಡೆಸಲಾಗಿತ್ತು.
ತಮಗೆ ನೀಡಲಾಗಿರುವ ‘ಝಡ್’ ವರ್ಗದ ಭದ್ರತೆಯನ್ನು ಬಯಸುವುದಿಲ್ಲ, ಆದರೆ ನಾನು ‘ಎ’ ವರ್ಗದ ನಾಗರಿಕನಾಗಿ ಸ್ವಾತಂತ್ರ್ಯದಿಂದ ಬದುಕಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅವರ ಕಾರ್ ಮೇಲೆ ಗುಂಡು ಹಾರಿಸಿದ ನಂತರ ‘Z’ ಕೆಟಗರಿ ಭದ್ರತೆ ನೀಡಲಾಗಿದೆ. ಕೇಂದ್ರವು AIMIM ನಾಯಕನ ಭದ್ರತೆಯನ್ನು ಪರಿಶೀಲಿಸಿ ಮತ್ತು CRPF ನ ‘Z’ ವರ್ಗದ ಭದ್ರತೆಯನ್ನು ತಕ್ಷಣವೇ ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕಾರ್ ಮೇಲೆ ಗುಂಡು ಹಾರಿಸಿದ ಘಟನೆಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಸೋಮವಾರ ಸಂಸತ್ತಿನಲ್ಲಿ ವಿವರವಾದ ಉತ್ತರವನ್ನು ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.