ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ತನ್ನನ್ನು ಎನ್ ಕೌಂಟರ್ ಮಾಡಬಹುದು ಎಂಬ ಭೀತಿಯಿಂದ ‘ನನ್ನನ್ನು ಶೂಟ್ ಮಾಡಬೇಡಿ’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಪೊಲೀಸ್ ಠಾಣೆಗೆ ಹಾಜರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ಅಂಕಿತ್ ವರ್ಮಾ ಎಂಬ ಈ ಆರೋಪಿ ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದ ಬಳಿಕ ಎನ್ಕೌಂಟರ್ ಭೀತಿಯಿಂದ ಈ ರೀತಿ ಬೋರ್ಡ್ ಹಾಕಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಆರು ತಿಂಗಳ ಹಿಂದೆ ಅಂಕಿತ್ ವರ್ಮಾ ಮತ್ತಾತನ ಸಹಚರರು ಕಾಲೇಜಿನಿಂದ ಹಿಂದಿರುಗುತ್ತಿದ್ದ ಮಹೋಲಿ ಕೋರಿ ಗ್ರಾಮದ ಅಮರ್ಜಿತ್ ಚೌಹಾನ್ ಎಂಬವರನ್ನು ಅಡ್ಡಗಟ್ಟಿ ಅವರಿಂದ ನಗ, ನಗದು, ಮೊಬೈಲ್ ಫೋನ್ ದೋಚಿದ್ದರು. ಈ ಸಂಬಂಧ ಛಾಪಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಹುಡುಕಾಟ ನಡೆಸಿದ್ದ ಪೊಲೀಸರು ಅವರುಗಳ ಸುಳಿವು ನೀಡಿದವರಿಗೆ 20,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ವಿಚಾರ ತಿಳಿದ ಅಂಕಿತ್ ವರ್ಮಾ ಎನ್ಕೌಂಟರ್ ಭೀತಿಯಿಂದ ಈಗ ಪೊಲೀಸರಿಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದಲ್ಲಿ ಪೊಲೀಸರ ಕುರಿತಂತೆ ಕ್ರಿಮಿನಲ್ ಗಳು ತೀವ್ರ ಭಯ ಭೀತಿಯನ್ನು ಹೊಂದಿದ್ದು, ಈ ಹಿಂದೆಯೂ ಇದೇ ರೀತಿ ಹಲವರು ಶರಣಾಗಿದ್ದರು.