ನಮ್ಮೆಲ್ಲರಿಗೂ ಭಾರೀ ಆರಾಮದಾಯಕವಾಗಬಲ್ಲ ಒಂದೊಂದು ಬಗೆಯ ಧಿರಿಸಿರುತ್ತದೆ. ಕೆಲವರಿಗೆ ಕುರ್ತಾ ಪೈಜಾಮಾ ಆರಾಮ ಎನಿಸಿದರೆ, ಕೆಲವರಿಗೆ ಪಂಚೆ ಭಾರೀ ಕಂಫರ್ಟ್ ಕೊಡುತ್ತದೆ. ಹಾಗೇ ಹೆಂಗಸರಿಗೂ ಸಹ ಕೆಲವರಿಗೆ ನೈಟಿ ಇಷ್ಟವಾದರೆ ಕೆಲವರಿಗೆ ಸೀರೆ ಆರಾಮ ಎನಿಸುತ್ತದೆ.
ನೋಯಿಡಾದಲ್ಲಿರುವ ’ಹಿಮ್ಸಾಗರ್ ಅಪಾರ್ಟ್‌ಮೆಂಟ್’ ಹೆಸರಿನ ವಸತಿ ಸಮಾಜವೊಂದು ತನ್ನ ನಿವಾಸಿಗಳಿಗೆ ಧರಿಸಬೇಕಾದ ಬಟ್ಟೆಗಳ ಕುರಿತು ಸುತ್ತೋಲೆ ಹೊರಡಿಸುವ ಮೂಲಕ ಸದ್ದು ಮಾಡುತ್ತಿದೆ.
“ಸಾರ್ವಜನಿಕವಾಗಿ ಓಡಾಡುವ ವೇಳೆ ಇತರರಿಗೆ ಕಿರಿಕಿರಿಯಾಗದ ರೀತಿಯಲ್ಲಿ ಬಟ್ಟೆಗಳನ್ನು ಧರಿಸಲು ನಾವು ನಿಮ್ಮಿಂದ ನಿರೀಕ್ಷೆ ಮಾಡುತ್ತೇವೆ. ಹೀಗಾಗಿ, ಮನೆಯಲ್ಲಿ ಧರಿಸಬಹುದಾದ ಲುಂಗಿ ಹಾಗೂ ನೈಟಿಗಳನ್ನು ಮನೆಯಿಂದ ಹೊರಗೆ ಓಡಾಡುವ ವೇಳೆ ಧರಿಸುವಂತಿಲ್ಲ,” ಎಂದು ಈ ಸುತ್ತೋಲೆಯ ಮೂಲಕ ತಿಳಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಸಜ್ಜನರ ಧಿರಿಸೆಂದೇ ಹೆಸರಾದ ಲುಂಗಿಯ ಮೇಲೆ ಹೀಗೆ ನಿಷೇಧ ಹೇರಿರುವುದನ್ನು ಕೆಲ ನೆಟ್ಟಿಗರು ವಿರೋಧಿಸಿದರೆ, ಇದರ ಪರವಾಗಿ ಕೆಲ ನೆಟ್ಟಿಗರು ಸಮರ್ಥನೆಗೆ ನಿಂತಿದ್ದಾರೆ.