ಮೂತ್ರವು ನಮ್ಮ ದೇಹದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ಸಂಕೇತಗಳನ್ನು ನೀಡುತ್ತದೆ. ಮೂತ್ರವು ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದರೆ, ಅದರಲ್ಲಿ ಯಾವುದೇ ಬದಲಾವಣೆ ಅಥವಾ ಕೆಟ್ಟ ವಾಸನೆ ಕಂಡುಬಂದರೆ ಏನೋ ಸಮಸ್ಯೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಮೂತ್ರದ ಬಣ್ಣ ಮತ್ತು ವಾಸನೆ ನಮ್ಮ ಆರೋಗ್ಯದ ಬಗ್ಗೆ ಹೇಳುತ್ತದೆ. ಮೂತ್ರ ಕೆಟ್ಟ ವಾಸನೆ ಬರುತ್ತಿದ್ದರೆ ಅನೇಕ ಜನರು ಅದನ್ನು ಲಘುವಾಗಿ ಪರಿಗಣಿಸುತ್ತಾರೆ ಮತ್ತು ನಿರ್ಲಕ್ಷಿಸುತ್ತಾರೆ. ಆದರೆ ಇದು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು.
ಮೂತ್ರದ ಸೋಂಕು
ಮೂತ್ರದ ಸೋಂಕು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ತೊಂದರೆ. ಬ್ಯಾಕ್ಟೀರಿಯಾವು ಮೂತ್ರದೊಂದಿಗೆ ದೇಹದ ಉಳಿದ ಭಾಗಗಳಿಗೆ ಹರಡಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ಸಂವೇದನೆ ಮತ್ತು ನೋವನ್ನು ಉಂಟು ಮಾಡಬಹುದು. ವಿಪರೀತ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ದುರ್ವಾಸನೆ, ಆಯಾಸ, ಸರಿಯಾದ ಪ್ರಮಾಣದಲ್ಲಿ ಮೂತ್ರ ಬರದೇ ಇರುವುದು ಇವೆಲ್ಲವೂ ಸೋಂಕಿನ ಸಾಮಾನ್ಯ ಲಕ್ಷಣಗಳು. ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಮಧುಮೇಹ
ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾದಾಗ ಅದನ್ನು ಮಧುಮೇಹವೆಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಕೂಡ ಮೂತ್ರವು ದುರ್ವಾಸನೆಯಿಂದ ಕೂಡಿರುತ್ತದೆ. ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾದಾಗ ಅಥವಾ ಅದನ್ನು ಸರಿಯಾಗಿ ಬಳಸದಿದ್ದರೆ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ರಕ್ತ ಮತ್ತು ಮೂತ್ರದ ಪಿಹೆಚ್ ಮಟ್ಟವು ಹದಗೆಡುತ್ತದೆ. ಪರಿಣಾಮ ಮೂತ್ರದ ವಾಸನೆ ಹೆಚ್ಚುತ್ತದೆ.
ಕ್ಲಮೈಡಿಯ ಮತ್ತು ಗೊನೊರಿಯಾ
ಕ್ಲಮೈಡಿಯ ಮತ್ತು ಗೊನೊರಿಯಾ ಮೂತ್ರನಾಳದ ಮೇಲೆ ಪರಿಣಾಮ ಬೀರುವ ಲೈಂಗಿಕವಾಗಿ ಹರಡುವ ಸೋಂಕುಗಳು. ಈ ಸೋಂಕುಗಳಿಂದ ಬಳಲುತ್ತಿರುವವರಲ್ಲಿ ಕೂಡ ಮೂತ್ರ ದುರ್ವಾಸನೆಯಿಂದ ಕೂಡಿರುತ್ತದೆ. ಈ ಸೋಂಕುಗಳು ಮೂತ್ರನಾಳ ಮತ್ತು ಗುಪ್ತಾಂಗಗಳಲ್ಲಿ ಊತವನ್ನು ಉಂಟುಮಾಡುತ್ತವೆ, ಮೂತ್ರದ ಹರಿವನ್ನು ತಡೆಯುತ್ತವೆ. ಪರಿಣಾಮ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಮೂತ್ರವನ್ನು ಪ್ರವೇಶಿಸಬಹುದು. ಇದು ಕೆಟ್ಟ ವಾಸನೆಗೆ ಕಾರಣವಾಗುತ್ತದೆ.
ಕಿಡ್ನಿ ಸಮಸ್ಯೆಗಳು
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗಲೂ ವಾಸನೆ ಬದಲಾಗುತ್ತದೆ. ಇದನ್ನು ಮೂತ್ರಪಿಂಡದ ಅಪಸಾಮಾನ್ಯ ಕ್ರಿಯೆ ಎಂದೂ ಕರೆಯುತ್ತಾರೆ. ಮೂತ್ರದ ವಾಸನೆಯು ಅಮೋನಿಯಾದಂತೆಯೇ ಇರುತ್ತದೆ. ಕೆಲವೊಮ್ಮೆ ಬಲವಾದ ಮತ್ತು ವಿಚಿತ್ರವಾದ ವಾಸನೆ ಕೂಡ ಬರಬಹುದು. ಇದು ಕಿಡ್ನಿಗಳ ಸಮಸ್ಯೆ ಅಥವಾ ಸೋಂಕಿನ ಸಂಕೇತವಾಗಿರಬಹುದು.