ನೀವು ಸಿಂಗಲ್ ಆಗಿದ್ದಾಗ ಬೇಕಾಬಿಟ್ಟಿ ಬದುಕಿರಬಹುದು, ಭವಿಷ್ಯದ ಯೋಜನೆಗಳಿಲ್ಲದೆ ದಿನ ಕಳೆದಿರಬಹುದು. ಆದರೆ ವಿವಾಹವಾದ ಬಳಿಕ ಈ ವಿಷಯಗಳ ಬಗ್ಗೆ ನೀವು ಎಚ್ಚರ ವಹಿಸುವುದು ಬಹಳ ಮುಖ್ಯ.
ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ನಿಲುವುಗಳನ್ನು ಹಂಚಿಕೊಳ್ಳಿ. ನಿಮ್ಮ ಖರ್ಚು ವೆಚ್ಚಗಳು, ಜವಾಬ್ದಾರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಅವುಗಳ ಅನಿವಾರ್ಯತೆಯ ಬಗ್ಗೆ ತಿಳಿಸಿ.
ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಮಹಿಳೆಯರು ತಾಯಿ ಮನೆಯ ಖರ್ಚು ನೋಡಿಕೊಳ್ಳುವ ಅಥವಾ ಸಣ್ಣ ಮಟ್ಟಿನ ಸಹಾಯ ಮಾಡುವ ಅನಿವಾರ್ಯತೆ ಇರುತ್ತದೆ. ಇದರ ಕುರಿತು ಮೊದಲೇ ಹೇಳಿಕೊಂಡರೆ ಹಣದ ವಿಷಯದಲ್ಲಿ ವೈಮನಸ್ಸು ಮೂಡುವ ಸಾಧ್ಯತೆ ಕಡಿಮೆ.
ಮದುವೆಯಾದ ಬಳಿಕ ಸಂಸಾರ ದೊಡ್ಡದಾದ ಬಳಿಕ ಖರ್ಚು ವೆಚ್ಚಗಳು ಹೆಚ್ಚುವುದು ಸಾಮಾನ್ಯ. ಹಾಗಾಗಿ ಯೋಜನೆಗಳ ಬಗ್ಗೆ ಆಲೋಚಿಸಿ. ಎಲ್ಐಸಿ, ಆರ್ ಡಿ ಮೂಲಕ ಸಣ್ಣ ಮೊತ್ತವನ್ನಾದರೂ ಒಟ್ಟುಗೂಡಿಸಿ.
ಆಸ್ತಿ ಅಥವಾ ಸಾಲದ ಬಗ್ಗೆ ಯಾವುದೇ ಕಾರಣಕ್ಕೂ ಸಂಗಾತಿಯಿಂದ ವಿವರಗಳನ್ನು ಮುಚ್ಚಿಡದಿರಿ. ಆರ್ಥಿಕ ಜವಾಬ್ದಾರಿಗಳನ್ನು ಇಬ್ಬರೂ ಹಂಚಿಕೊಂಡಾಗ ಸಂಬಂಧವೂ ಆಪ್ತವಾಗುತ್ತದೆ. ಹೊರೆಯೂ ಕೆಳಗಿಳಿಯುತ್ತದೆ.